Advertisement

ಕನ್ನಡ ಭಾಷೆಗೆ ದೊರೆಯಲಿ ಅಗ್ರಸ್ಥಾನ

02:45 PM Nov 02, 2019 | |

ಚಿತ್ರದುರ್ಗ: ಯಾವ ರಾಜ್ಯ, ಯಾವುದೇ ಭಾಷಿಕರಾಗಿದ್ದರೂ ಕರ್ನಾಟಕದಲ್ಲಿದ್ದಾಗ ಕನ್ನಡ ಕಲಿಯಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಭಾಷಾ ಪರಂಪರೆ ಶ್ರೀಮಂತವಾಗಿದೆ. ರಾಜ್ಯದ ಶ್ರೇಷ್ಠ ಸಾಹಿತ್ಯ ಪರಂಪರೆಗೆ ವಿಶ್ವ ಮನ್ನಣೆ ಇದೆ. ಕನ್ನಡ ಸಾಹಿತ್ಯ ವಿಶ್ವದ ಯಾವುದೇ ಭಾಷೆಯ ಸಾಹಿತ್ಯವನ್ನು ಸರಿಗಟ್ಟುವಂತಿದೆ. ಈ ಹಿರಿಮೆಗೆ ಕುಂದು ಬಾರದಂತೆ ನಾವೆಲ್ಲರೂ ಕಾಪಾಡಿಕೊಳ್ಳಬೇಕು ಎಂದರು.

ಕರ್ನಾಟಕವೆಂದರೆ ಕೇವಲ ಗಡಿ ರೇಖೆಗೆ ಸೀಮಿತವಾದ ಒಂದು ಭೌಗೋಳಿಕ ಪ್ರದೇಶವಲ್ಲ. ಒಟ್ಟಾರೆ ರಾಷ್ಟ್ರೀಯ ಸಂಸ್ಕೃತಿಯನ್ನು, ಕನ್ನಡದ ಸ್ವಂತ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ಅತ್ಯುನ್ನತ ಭಾವ. ಯಾವುದೇ ರಾಜ್ಯ, ನಾಡು, ಭಾಷಿಕರಾಗಿರಲಿ, ಕರ್ನಾಟಕದಲ್ಲಿ ಇರುವವರೆಲ್ಲರೂ ತಪ್ಪದೇ ಕನ್ನಡ ಕಲಿಯಬೇಕು. ಪ್ರಾಚೀನ ಭಾಷೆಯಾಗಿರುವ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ವಾಚನ, ಗೀತಗಾಯನ, ಚರ್ಚಾಕೂಟಗಳಲ್ಲಿ ಭಾಗವಹಿಸುವ ಮೂಲಕ ಕನ್ನಡಾಭಿಮಾನ ಮೆರೆಯಬೇಕು ಎಂದು ಕರೆ ನೀಡಿದರು.

ಕನ್ನಡವನ್ನು ಸುಂದರ ಭಾಷೆಯನ್ನಾಗಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಹಾಗೂ ಜನರ ಮನೋಬಲ ಪ್ರದರ್ಶಿಸಿಸಬೇಕಿದೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಬದ್ಧರಾಗಬೇಕು. ಭಾರತದ ಅಭಿವೃದ್ಧಿ ನಕ್ಷೆಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ದೇಶದ ಒಟ್ಟು ಆರ್ಥಿಕ ವರಮಾನದಲ್ಲಿ ಕರ್ನಾಟಕದ್ದೇ ಸಿಂಹಪಾಲು. ವಿಜ್ಞಾನಿಗಳ ಕರ್ಮಭೂಮಿ ಈ ನಾಡು. ಇಲ್ಲಿನ ವೈಜ್ಞಾನಿಕ ಸಂಸ್ಥೆಗಳಿಗೆ ವಿಶ್ವ ಮಾನ್ಯತೆ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮ ರಾಜ್ಯಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಜಿಲ್ಲೆಯ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಯಿತು. ನೇಕಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ಮೊಳಕಾಲ್ಮೂರಿನ ರೇಷ್ಮೆ ಸೀರೆ ನೇಕಾರರಾದ ಎಸ್‌.ಎಲ್‌. ಮಲ್ಲಿಕಾರ್ಜುನ.

ವೈದ್ಯಕೀಯ ಸೇವೆ ಕ್ಷೇತ್ರದಲ್ಲಿ ಹೊಳಲ್ಕೆರೆಯ ಡಾ| ಎನ್‌.ಬಿ. ಸಜ್ಜನ್‌. ಜಾನಪದ ಕ್ಷೇತ್ರದಲ್ಲಿ ಕಿಂದರಜೋಗಿ ಪ್ರಕಾರದಲ್ಲಿನ ಸೇವೆಗಾಗಿ ದೇವರಹಳ್ಳಿಯ ದೊಡ್ಡಯಲ್ಲಪ್ಪ. ರಂಗಭೂಮಿ, ಬೀದಿನಾಟಕ, ಸಂಗೀತ ಕ್ಷೇತ್ರದಲ್ಲಿ ಹಿರಿಯೂರಿನ ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ, ಕೃಷಿ ಕ್ಷೇತ್ರದಲ್ಲಿ ಬಿ.ಜಿ. ಕೆರೆಯ ವೀರಭದ್ರಪ್ಪ. ಕ್ರೀಡಾ ಕ್ಷೇತ್ರದಲ್ಲಿ ಚಿತ್ರದುರ್ಗದ ಕುಸ್ತಿಪಟು ಸದ್ದಾಂ ಹುಸೇನ್‌. ಸೋಬಾನೆ ಪದಗಳ ಮೂಲಕ ಖ್ಯಾತಿ ಪಡೆದಿರುವ
ಕುಂಚಿಗನಾಳಿನ ಕರಿಯಮ್ಮ, ಬೀದಿನಾಟಕದಲ್ಲಿ (ಜಾನಪದ ಕ್ಷೇತ್ರ) ಕಲ್ಕೆರೆಯ ಎ.ಕೆ. ಹನುಮಂತಪ್ಪ.

ಕಂಬಳಿ ನೇಕಾರಿಕೆಯಲ್ಲಿ ಸಾಧನೆ ತೋರಿದ ಗೊರ್ಲತ್ತಿನ ಗಂಗಮ್ಮ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ವಿಧಾನಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌, ಜಿಪಂ ಸಿಇಒ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಡಾ| ಕೆ. ಅರುಣ್‌, ಉಪವಿಭಾಗಾಧಿಕಾರಿ ವಿ. ಪ್ರಸನ್ನ, ತಹಶೀಲ್ದಾರ್‌ ವೆಂಕಟೇಶಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next