ಚಿತ್ರದುರ್ಗ: ವಿವಿಧ ಇಲಾಖೆಗಳಲ್ಲಿ ಜನರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳಿದ್ದು, ನರೇಗಾ ಅಡಿ ಬಹಳಷ್ಟು ಅನುಕೂಲಗಳಿವೆ. ಆದರೆ ಜಿಲ್ಲೆಯ ಜನತೆ ಸೌಲಭ್ಯ ಪಡೆಯಲು ಮುಂದಾಗುತ್ತಿಲ್ಲ. ಇದಕ್ಕೆ ಮಾಹಿತಿ ಕೊರತೆಯೋ ಅಥವಾ ಜನರ ನಿರಾಸಕ್ತಿಯೋ ತಿಳಿಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಸಿಂಗಾಪುರ ಕಾವಲ್‌ಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕರು ಮುಂದೆ ಬರುತ್ತಿಲ್ಲ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಸುಮಾರು 17 ಬಗೆಯ ಸೌಲಭ್ಯಗಳಿವೆ. ಆದರೆ ಕಟ್ಟಡ ಕಾರ್ಮಿಕರು ಹೆಚ್ಚು ನೋಂದಣಿ ಮಾಡಿಕೊಳ್ಳುತ್ತಿಲ್ಲ. ನರೇಗಾದಡಿ ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ತಮ್ಮ ಹೊಲಗಳಲ್ಲಿ ತಾವೇ ಕೆಲಸ ಮಾಡಿ, ಕೂಲಿ ಪಡೆಯಲು ಅವಕಾಶವಿದ್ದರೂ ಬಳಸಿಕೊಳ್ಳುತ್ತಿಲ್ಲ. ಆರೋಗ್ಯ ಇಲಾಖೆಯಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ 5 ಲಕ್ಷ ರೂ. ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಬಹಳಷ್ಟು ಕುಟುಂಬಗಳು ಕಾರ್ಡ್ ಪಡೆದುಕೊಂಡಿಲ್ಲ. ಆರೋಗ್ಯ ಸಮಸ್ಯೆ ಕಂಡುಬಂದಾಗ ಉಳಿತಾಯ ಮಾಡಿ ಕೂಡಿಟ್ಟ ಹಣ ಖರ್ಚು ಮಾಡಿ ಬರಿಗೈ ಮಾಡಿಕೊಳ್ಳುತ್ತೀರಿ. ಇನ್ನಾದರೂ ಎಲ್ಲ ಅರ್ಹ ಬಿಪಿಎಲ್ ಕುಟುಂಬದವರು ತಪ್ಪದೇ ಎಬಿಎಆರ್‌ಕೆ ಕಾರ್ಡ್ ಪಡೆದುಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಭೂಮಿ ಖಾತೆಗಳ ಬದಲಾವಣೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪೌತಿ ಖಾತೆ ಬದಲಾವಣೆ ಕಾರ್ಯವನ್ನು ಆಂದೋಲನದ ರೀತಿಯಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿ ವಿದ್ಯಾವಂತ ಮಹಿಳೆಯರಿಗೆ ಉದ್ಯೋಗ ಮಾಡಲು ಆಸಕ್ತಿ ಇದ್ದಲ್ಲಿ ಸ್ವಯಂಪ್ರೇರಣೆಯಿಂದ ಮುಂದೆ ಬಂದಲ್ಲಿ ಕೌಶಲ್ಯ ತರಬೇತಿ ನೀಡಲಾಗುವುದು. ಜೊತೆಗೆ ಬ್ಯಾಂಕ್ ಗಳಿಂದ ಅಗತ್ಯ ಸಾಲ ಸೌಲಭ್ಯ ದೊರಕಿಸಲಾಗುವುದು ಎಂದರು.
ತಾಪಂ ಅಧ್ಯಕ್ಷ ಲಿಂಗರಾಜು ಮಾತನಾಡಿ, ಹುಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ 17 ಗ್ರಾಮಗಳಿಗೆ ಶಾಂತಿ ಸಾಗರದಿಂದ 3.5 ಕೋಟಿ ರೂ. ವೆಚ್ಚದಲ್ಲಿ ನೀರು ಪೂರೈಸುವ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಧಿಕಾರಿಗಳು ಹಾಗೂ ಶಾಸಕರು ನೆರವು ನೀಡಿದ್ದಾರೆ. ನೀರಿಗಾಗಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದ ಕಾರಣಕ್ಕೆ ಈ ಭಾಗದ ಸುಮಾರು 25 ರಿಂದ 30 ಜನರ ಮೇಲೆ ಪೊಲೀಸ್ ಕೇಸ್ ದಾಖಲಾಗಿದೆ. ಈ ಕೇಸ್ ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಲ್ಲಿಮನವಿ ಮಾಡಿದರು.
ತಹಶೀಲ್ದಾರ್ ವೆಂಕಟೇಶಯ್ಯ ಮಾತನಾಡಿ, ಗ್ರಾಪಂಗಳಲ್ಲಿ ರೈತರಿಗೆ ಪಹಣಿ ವಿತರಿಸುವ ಸೌಲಭ್ಯ ಲಭ್ಯವಿದ್ದರೂ ವಿತರಿಸುತ್ತಿಲ್ಲ, ಆಧಾರ್ ತಿದ್ದುಪಡಿ ಮಾಡುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ನೂರಾರು ರೂ. ಖರ್ಚು ಮಾಡಿಕೊಂಡು ಜಿಲ್ಲಾ ಕೇಂದ್ರಕ್ಕೆ, ತಹಶೀಲ್ದಾರ್ ಕಚೇರಿಗೆ ಬರುತ್ತಿದ್ದಾರೆ. ಎಲ್ಲ ಗ್ರಾಪಂಗಳಲ್ಲಿ ಪಹಣಿ ವಿತರಿಸುವುದು ಹಾಗೂ ಆಧಾರ್ ತಿದ್ದುಪಡಿ ಕಾರ್ಯ ಕೈಗೊಳ್ಳಬೇಕೆಂದರು.
ಜನಸ್ಪಂದನ ಸಭೆಯಲ್ಲಿ ಎಎಸ್‌ಪಿ ಎಂ.ಬಿ. ನಂದಗಾವಿ, ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷೆ ನಿರ್ಮಲಮ್ಮ, ಜಿಪಂ ಉಪಕಾರ್ಯದರ್ಶಿ ಡಾ| ರಂಗಸ್ವಾಮಿ ಹಾಗೂ ವಿವಿಧ ಇಲಾಖೆಗಳ
ಅಧಿಕಾರಿಗಳು ಭಾಗವಹಿಸಿದ್ದರು.