Advertisement

ಜೀವನದ ಅನುಭವ ಸಾರವೇ ಜಾನಪದ

04:45 PM Dec 29, 2019 | Naveen |

ಚಿತ್ರದುರ್ಗ: ಕಷ್ಟದ ಸಂದರ್ಭಗಳನ್ನು ಸುಖಮಯವಾಗಿಸುವ ಶಕ್ತಿ ಜಾನಪದಕ್ಕಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌. ಬಿಲ್ಲಪ್ಪ ಹೇಳಿದರು.

Advertisement

ನಗರದ ಶ್ರೀ ಕಬೀರಾನಂದಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಾನಪದ ಜ್ಞಾನ ಸಂಪದ ಕಾರ್ಯಕ್ರಮದಲ್ಲಿ ಡಾ| ಎಸ್‌.ಎಂ. ಮುತ್ತಯ್ಯ ಬರೆದ “ಬುಡಕಟ್ಟು ಜ್ಞಾನ ಪರಂಪರೆ’ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಜಾನಪದ ಜೀವನದ ಅನುಭವವೇ ಆಗಿದೆ. ನೈಜ ಮತ್ತು ಸಹಜ ಬದುಕಿಗೆ ಅರ್ಥ ಅಲ್ಲಿ ಸಿಗುತ್ತದೆ. ನಮ್ಮ ದೇಶದ ವೈವಿಧ್ಯತೆ ಅರಿಯಲು ಇಲ್ಲಿನ ಬುಡಕಟ್ಟು ಜೀವನವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ವೇದಕ್ಕೆ ಸರಿ ಸಮಾನವಾದುದು ಗಾದೆ. ಜಾನಪದರಲ್ಲಿ ಗಾದೆಗೆ ಕೊರತೆಯಿಲ್ಲ. ಬುಡಕಟ್ಟು ಜನತೆ ಅಪಾರ ಕಲೆ, ಸಾಹಿತ್ಯ ಹೊಂದಿದ್ದಾರೆ. ಇವರು ನಿಜವಾದ ಪ್ರಕೃತಿಯ ಆರಾಧಕರು. ನಿಸರ್ಗದ ಜೊತೆಗೆ ಜೀವಾನುನುಭವ ಹಾಗೂ ಸಾಮಾಜಿಕ ಪ್ರಜ್ಞೆ ಹೊಂದಿದವರಾಗಿದ್ದಾರೆ ಎಂದು ಶ್ಲಾಘಿಸಿದರು.

ನಿಜವಾದ ಬದುಕಿನ ಮೌಲ್ಯ ಬುಡಕಟ್ಟಿನಲ್ಲಿದೆ. ಬೆಳೆ ಬೆಳೆಯುವುದು, ಬೆಳೆದ ಬೆಳೆಗಳನ್ನು ಸುಸಜ್ಜಿತವಾಗಿ ಸಂಗ್ರಹಿಸಿಸುವುದು, ಪ್ರಾಣಿಗಳ ಸಾಕಾಣೆ, ಮನೆ ಮದ್ದು ಸಂಸ್ಕೃತಿ, ಗಿಡಮೂಲಿಕೆಗಳ ಸಂರಕ್ಷಣೆ ಯಾವ ಶೈಕ್ಷಣಿಕ ಜ್ಞಾನಕ್ಕೂ ಕಡಿಮೆ ಇಲ್ಲ. ಅಕ್ಷರದ ಅರಿವಿಲ್ಲದ ನಮ್ಮ ಸಿರಿಯಜ್ಜಿ ಸಾವಿರಾರು ಜಾನಪದ ಹಾಡುಗಳನ್ನು ಹಾಡಿದ್ದಾರೆ. ಈ ಹಾಡುಗಳನ್ನಿಟ್ಟುಕೊಂಡು ಅನೇಕರು ಸಂಶೋಧನೆ ಮಾಡಿ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಅದೇ ರೀತಿ ಸಾಲುಮರದ ತಿಮ್ಮಕ್ಕ ಅವರ ಯಶಸ್ಸು ಓದಿನಿಂದ ಬಂದಿದ್ದಲ್ಲ.ಜಾನಪದದ ಮೂಲಕ ಅವರ ಸ್ಥಾನ ಔನ್ನತ್ಯಕ್ಕೇರಿದೆ ಎಂದು ತಿಳಿಸಿದರು.

Advertisement

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ| ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಇಂದಿನ ಯುವ ಪೀಳಿಗೆ ಆಧುನಿಕತೆಯ ಆಕರ್ಷಣೆಗೆ ಒಳಗಾಗಬಾರದು. ಪಾರಂಪರಿಕ ಜ್ಞಾನವನ್ನು ಅರಿತರೆ ಬದುಕಿನ ಸವಾಲುಗಳಿಗೆ ಉತ್ತರ ಸಿಗುತ್ತದೆ. ಜಾನಪದ ಕೇವಲ ಮನೋರಂಜನೆಯಲ್ಲ. ಅದರಲ್ಲಿ ಬದುಕಿನ ಮೌಲ್ಯಗಳಿವೆ. ನೀತಿ, ಧರ್ಮ, ಸಾಮರಸ್ಯ, ಸೌಹಾರ್ದತೆಯ ಗುಣಗಳಿಂದ ಆದಿಯಿಂದ ಇಂದಿನವರೆಗೆ ಉಳಿದಿವೆ. ಅದನ್ನು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಜಾನಪದ ಚಿಂತಕ ಡಾ| ಅರುಣ್‌ ಜೋಳದಕೂಡ್ಲಗಿ ಮಾತನಾಡಿ, ಜಾನಪದ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ವ್ಯವಸ್ಥೆ ಜಾರಿಯಾಗಬೇಕು. ಜಾನಪದ ವೈದ್ಯಕೀಯವನ್ನು ಇಂದಿನ ಮೆಡಿಕಲ್‌ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು. ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಜಾನಪದರ ವಾಸ್ತುಶಾಸ್ತ್ರವನ್ನು ತಿಳಿದುಕೊಳ್ಳಬೇಕು. ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿ ದೇಶಿ ಜ್ಞಾನವನ್ನು ಪರ್ಯಾಯವಾಗಿ ಕಲಿಸಲು, ಪಠ್ಯ ಹಾಗೂ ಐಚ್ಛಿಕ ವಿಷಯವನ್ನಾಗಿ ಇಡಬೇಕು ಎಂದು ಅಭಿಪ್ರಾಯಪಟ್ಟರು.

ತತ್ವಪದಗಾರ ಯುಗಧರ್ಮ ರಾಮಣ್ಣ, ವೀರಗಾಸೆ ಕಲಾವಿದ ಬೊಮ್ಮಲಿಂಗಪ್ಪ, ಲಾವಣಿ ತತ್ವ ಪದಗಾರ ಗುರುಸಿದ್ಧನಾಯಕ, ಜಾನಪದ ಗಾಯಕ ಆಯತೋಳ್‌ ವಿರೂಪಾಕ್ಷಪ್ಪ, ರಂಗಭೂಮಿ ಸಂಗೀತಗಾರ ವಿದ್ವಾನ್‌ ತಿಪ್ಪೇಸ್ವಾಮಿ, ನೃತ್ಯ ತರಬೇತುಗಾರ್ತಿ ಶ್ವೇತ ಭಟ್‌ ಅವರಿಗೆ “ಲೋಕೋತ್ಸವ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ. ಶಿವಮೂರ್ತಿ, ಪ್ರಾಧ್ಯಾಪಕ ಡಾ| ಎಸ್‌.ಎಂ. ಮುತ್ತಯ್ಯ, ವಕೀಲ ವೈ.ತಿಪ್ಪೇಸ್ವಾಮಿ,
ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ರಾಮಲಿಂಗ ಶೆಟ್ಟಿ, ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ. ವಿಜಯಕುಮಾರ್‌, ಮಾತೃಶ್ರೀ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಎಲ್‌. ಪ್ರಶಾಂತ್‌, ಗಾಯಕ ಡಿ.ಒ. ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next