ಚಿತ್ರದುರ್ಗ: ಜಲಶಕ್ತಿ ಅಭಿಯಾನ ಆಂದೋಲನದ ರೀತಿಯಲ್ಲಿ ಆದಾಗ ಮಾತ್ರ ಬರಪೀಡಿತ ಪ್ರದೇಶ ಚಿತ್ರದುರ್ಗದಲ್ಲಿ ಹಸಿರು ವಾತಾವರಣ ಕಾಣಲು ಸಾಧ್ಯ. ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್‌ಪ್ರಿಯಾ ಹೇಳಿದರು.
ಮಹಿಳಾ ಸೇವಾ ಸಮಾಜದ ಆವರಣದಲ್ಲಿ ತೆಂಗು, ಸೀಬೆ, ಕರಿಬೇವು ಸೇರಿದಂತೆ ವಿವಿಧ ಬಗೆಯ ಹಣ್ಣು ತರಕಾರಿ ಸಸಿಗಳನ್ನು ನೆಟ್ಟು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸೇವಾ ಸಮಾಜದ ವತಿಯಿಂದ ನಡೆಯುತ್ತಿರುವ ಅನಾಥ ಬಾಲಿಕಾಶ್ರಮದ ಮಕ್ಕಳ ಕುಂದು ಕೊರತೆ ಆಲಿಸಿದರು.
ಮಹಿಳೆಯರು ಮನೆಯಲ್ಲಿಯೇ ಕುಳಿತು ಸ್ವಾವಲಂಬಿಗಳಾಗಿ ದುಡಿಮೆ ಕಂಡುಕೊಳ್ಳುವ ಕೌಶಲ್ಯ ತರಬೇತಿಗಳನ್ನು ಮಹಿಳಾ ಸಮಾಜದಿಂದ ನೀಡುವಂತೆ ಸಲಹೆ ನೀಡಿದರು.
ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷರುದ್ರಸ್ವಾಮಿ ಮಾತನಾಡಿ, ಮಹಿಳಾ ಸಮಾಜ ಮೊದಲಿನಿಂದಲೂ ಅನೇಕ ಸಮಾಜಮುಖೀ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಊಟ ವಸತಿಯೊಂದಿಗೆ ಆಶ್ರಯ ನೀಡುತ್ತಿದೆ. ನೊಂದ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಕೌನ್ಸೆಲಿಂಗ್ ನಡೆಸಿ ಅಗತ್ಯ ನೆರವು ಹಾಗೂ ರಕ್ಷಣೆ ಕೊಡಿಸುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಂಗಪ್ಪ, ಪ್ರಾಧ್ಯಾಪಕ ಡಾ.ಕೆ.ಕೆ. ಕಮಾನಿ, ಪರಿಸರ ತಜ್ಞ ಎಚ್.ಎಸ್.ಕೆ. ಸ್ವಾಮಿ, ಮಹಿಳಾ ಸೇವಾ ಸಮಾಜದ ಕಾರ್ಯದರ್ಶಿ ಲತ ಉಮೇಶ್, ನಿರ್ದೇಶಕರಾದ ಭಾರತಿ ಸುರೇಶ್, ನಾಗರತ್ನ ವಿಶ್ವನಾಥ್, ಅನ್ನಪೂರ್ಣ ಸಜ್ಜನ್, ಮಹಾಂತಮ್ಮ ಜಯಪ್ಪ, ವಿಜಯ ಸುನೀಲ್, ಉಮಾ ಗುರುರಾಜ್, ಸುಜಾತ ಹಿರೇಮಠ ಮತ್ತಿತರರಿದ್ದರು.