ಚಿತ್ರದುರ್ಗ: ಜಿಲ್ಲೆಯಲ್ಲಿ ಶೇಂಗಾ, ಕಡಲೆ, ತೊಗರಿ ಹಾಗೂ ರಾಗಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಭಾನುವಾರ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಹಿರೇಕೆರೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ. ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ಹಾಗೂ ಕಾರ್ಯಕರ್ತರು ಸಚಿವರನ್ನು ಭೇಟಿ ಮಾಡಿ ಅಹವಾಲು ಹೇಳಿಕೊಂಡರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಹಾರ ಧಾನ್ಯಗಳ ಕನಿಷ್ಠ ವೆಚ್ಚವನ್ನಾದರೂ ಸರಿದೂಗಿಸಲು ಬೆಂಬಲ ಬೆಲೆ ಮೂಲಕ ಖರೀದಿ ಕೇಂದ್ರಗಳನ್ನು ತೆರೆಯುತ್ತಿರುವುದು ಸ್ವಾಗತಾರ್ಹ. ಆದರೆ ಎಲ್ಲ ಜಿಲ್ಲೆಗಳಲ್ಲಿಯೂ ಎಲ್ಲ ಘೋಷಿತ ಬೆಳೆಗಳ ಖರೀದಿ ಕೇಂದ್ರ ತೆರೆಯದಿರುವುದು ರೈತರಿಗೆ ಅನಾನುಕೂಲವಾಗಿದೆ ಎಂಬ ಸಂಗತಿಯನ್ನು ಸಚಿವರ ಗಮನಕ್ಕೆ ತಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಸಾವಿರಾರು ರೈತರು ಶೇಂಗಾ, ಕಡಲೆ, ತೊಗರಿ ಮತ್ತು ರಾಗಿ ಧಾನ್ಯಗಳ ಬೆಳೆದಿದ್ದಾರೆ. ಖರೀದಿ ಕೇಂದ್ರ ತೆರೆಯದೇ ಇರುವುದು ಸಮಸ್ಯೆಯಾಗಿದೆ. ವಿಳಂಬ ಮಾಡದೆ ಖರೀದಿ ಕೇಂದ್ರ ತೆರೆಯುವ ಅಗತ್ಯವಿದೆ. ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಲು ನಿಗದಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲವೆಂಬ ತಾಂತ್ರಿಕ ಕಾರಣ ಮುಂದಿಟ್ಟು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.
ಚಳ್ಳಕೆರೆಯಲ್ಲಿ ಶೇಂಗಾ ಹಾಗೂ ತೊಗರಿ ಖರೀದಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಲಾಯಿತು. ಇದುವರೆಗೆ ಬೆಂಬಲ ಬೆಲೆಗಿಂತ ಜಾಸ್ತಿ ಇದ್ದ ಮೆಕ್ಕೆಜೋಳದ ಬೆಲೆ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮೆಕ್ಕೇಜೊಳ ಖರೀದಿ ಕೇಂದ್ರ ತೆರೆಯಲು ತಕ್ಷಣ ಮುಂದಾಗಬೇಕು. ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗ ನಿರ್ದೇಶನ ನೀಡಬೇಕೆಂದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮುದ್ದಾಪುರ ನಾಗರಾಜು, ಎಂ.ಬಿ.ತಿಪ್ಪೇಸ್ವಾಮಿ, ಪ್ರವೀಣ್ ಕುಮಾರ್, ಹಂಪಯ್ಯನ ಮಾಳಿಗೆ ಧನಂಜಯ ಮತ್ತಿತರರು ಇದ್ದರು.