ಚಿತ್ರದುರ್ಗ: ಮಹಿಳೆಯರು, ಮಕ್ಕಳು ಸೇರಿದಂತೆ ಬಹುತೇಕ ಜನರು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿಯ ಪ್ರಚಾರ ಸಮಿತಿ ನೂತನ ಅಧ್ಯಕ್ಷ ಬಿ. ಧನಂಜಯ ಹೇಳಿದರು.
ನಗರದ ಹೊರವಲಯದ ಮಠದ ಕುರುಬರಹಟ್ಟಿಯ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಜನಜಾಗೃತಿ ಚಿಂತನ ಮಂಥನ ಸಭೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು, ಯುವಕರು, ನೊಂದವರು, ದಮನಿತರ ಧ್ವನಿಯಾಗಿರುವ ಮಾನವ ಹಕ್ಕುಗಳ ಹೋರಾಟ ಚಾಲ್ತಿಗೆ ಬರಬೇಕು. ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ದಮನಿತರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಲೇ ಇವೆ. ಇವು ಕಡಿಮೆಯಾಗಬೇಕಾದರೆ ಮಾನವ ಹಕ್ಕುಗಳು ಹೆಚ್ಚು ಬಳಕೆಯಾಗಬೇಕು. ಮಕ್ಕಳ ಹಕ್ಕು, ಮಹಿಳಾ ಹಕ್ಕುಗಳು ಸೀಮಿತವಾದರೆ, ಮಾನವ ಹಕ್ಕು ಎಲ್ಲರ ಧ್ವನಿಯಾಗಿದೆ. ಹೋರಾಟ ಸಮಿತಿಯ ಸದಸ್ಯರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಂಘಟನೆಗಳ ಜತೆ ಸಹಭಾಗಿತ್ವದಿಂದ ನಡೆಯಬೇಕು ಎಂದರು.
ಮಹಿಳಾ ಘಟಕದ ಜಿಲ್ಲಾ ಗೌರವಾಧ್ಯಕ್ಷೆ ಜಿ.ಎಸ್. ಶಾಂತಾ ಮಾತನಾಡಿ, ಮಹಿಳೆಯರು ಸಂಘಟಿತರಾಗಿ ಸ್ತ್ರೀಶಕ್ತಿಯನ್ನು ಬಲಪಡಿಸಬೇಕು. ಅದಕ್ಕಾಗಿ ಸಭೆ-ಸಮಾರಂಭಗಳಲ್ಲಿ ಮಾನವ ಹಕ್ಕುಗಳ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಮಾಲತೇಶ್ ಅರಸ್ ಮಾತನಾಡಿ, ಯುವಜನರು ಹೋರಾಟ ಮನೋಭಾವವನ್ನೇ ಕಳೆದುಕೊಂಡು ಸಂಘಟನೆಯಿಂದ ವಿಮುಖರಾಗುತ್ತಿದ್ದಾರೆ. ಮಾನವ ಹಕ್ಕುಗಳು ಮುಂದಿನ ದಿನಗಳಲ್ಲಿ ಹೆಚ್ಚು ಶಕ್ತಿಯುತವಾಗಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿ. ಧನಂಜಯ ಅವರನ್ನು ಸನ್ಮಾನಿಸಲಾಯಿತು. ರೈತ ಘಟಕದ ಅಧ್ಯಕ್ಷ ನಾರಾಯಣ ಆಚಾರ್ ಮಾತನಾಡಿದರು. ಅಂಗವಿಕಲ ಮಕ್ಕಳ ಶಿಕ್ಷಣ ಕೇಂದ್ರದ ಎಸ್.ಕೆ. ಪ್ರಭಾವತಿ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎಲ್.ಇ. ಶಾಂತಾ, ಜಿಲ್ಲಾ ಗೌರವಾಧ್ಯಕ್ಷ ಬಿ.ಸಿ. ಗಿರೀಶ್, ಎಸ್. ಇಂದಿರಾ, ಉಪಾಧ್ಯಕ್ಷ ಶಾಂತರಾಜ್, ಯುವ ಘಟಕದ ಅಧ್ಯಕ್ಷ ಶಶಿಕುಮಾರ್, ಯಶವಂತ್ ಕುಮಾರ್ ಮತ್ತಿತರರು ಇದ್ದರು.