ಚಿತ್ರದುರ್ಗ: ಬೀದಿ ದೀಪ ಆರಿಸಿಲ್ಲವೇ? ಬೀದಿ ದೀಪ ಬೆಳಗುತ್ತಿಲ್ಲವೆ? ಮನೆಗೆ ನೀರು ಬರುತ್ತಿಲ್ಲವೆ? ಚರಂಡಿ ಸ್ವಚ್ಛವಾಗಿಲ್ಲವೇ? ಕಸದ ವಾಹನ ಬರುತ್ತಿಲ್ಲವೇ? ಚಿಂತೆ ಬಿಡಿ. ನಿಮ್ಮ ಸಮಸ್ಯೆಗೆ ಬೆರಳ ತುದಿಯಲ್ಲೇ ಪರಿಹಾರ ಇದೆ. ನಿಮ್ಮ ಎಲ್ಲಾ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಮೊಬೈಲ್ ಫೋನಿನೊಳಗೊಬ್ಬ “ಹಿತೈಷಿ’ ಇದ್ದರೆ ಸಾಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಥಟ್ ಅಂತಾ ಬಂದು ಕೆಲಸ ಮಾಡಿಕೊಟ್ಟು ಹೋಗುತ್ತಾರೆ. ಹೌದು. ಚಿತ್ರದುರ್ಗ ಜಿಲ್ಲಾಡಳಿತ ಇಂಥದೊಂದು ಪ್ರಯೋಗಕ್ಕೆ ಮುಂದಾಗಿದ್ದು, ಜಿಲ್ಲೆಯ ನಗರ, ಪಟ್ಟಣ ವ್ಯಾಪ್ತಿಯಲ್ಲಿ ಕಸ, ಚರಂಡಿ ಸ್ವಚ್ಛತೆ, ಬೀದಿ ದೀಪ ಮತ್ತಿತರ ಸಮಸ್ಯೆಗಳಿಗೆ ಸ್ಪಂದಿಸಿ, ತ್ವರಿತವಾಗಿ ಪರಿಹಾರ ಕಲ್ಪಿಸಲು “ಹಿತೈಶಿ’ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿದೆ.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಿತೈಷಿ ಆ್ಯಪ್ ಲಭ್ಯವಿದ್ದು ಅಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ಸ್ನೇಹಿತರ ಬಳಿ ಇದ್ದರೆ ಶೇರ್ ಮಾಡಿಕೊಳ್ಳಬಹುದು. ಈ ಆ್ಯಪ್ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಗಾಗಿಯೇ ಅಭಿವೃದ್ಧಿ ಪಡಿಸಲಾಗಿದ್ದು, ಸಮಸ್ಯೆ ಇದ್ದಲ್ಲಿ ಆ್ಯಪ್ ಮೂಲಕ ಫೋಟೋ ಸಹಿತ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗ ಅಕ್ರಮ ತಡೆಯಲು “ಸಿ ವಿಜಿಲ್’ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿತ್ತು. ಅದೇ ಮಾದರಿಯಲ್ಲಿ ಈಗ “ಹಿತೈಶಿ’ ಆ್ಯಪ್ ತಯಾರಾಗಿದೆ. ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ನಗರಸಭೆಗಳು, ಹೊಸದುರ್ಗ ಪುರಸಭೆ, ಹೊಳಲ್ಕೆರೆ, ಮೊಳಕಾಲ್ಮೂರು, ನಾಯಕನಹಟ್ಟಿ ಪಪಂ ವ್ಯಾಪ್ತಿಯ ಸಾರ್ವಜನಿಕರು “ಹಿತೈಶಿ’ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಂಡು, ತಮ್ಮ ವಾರ್ಡ್ ವ್ಯಾಪ್ತಿಯ ಸಮಸ್ಯೆಗಳ ಕುರಿತು ಫೋಟೋ ಸಹಿತ ದೂರು ದಾಖಲಿಸಬಹುದು.
ಆ್ಯಪ್‌ನ ವಿಶೇಷ ಏನು?: ಕನ್ನಡ ಭಾಷೆಯಲ್ಲಿಯೂ ದೂರು, ಮಾಹಿತಿ ಸಲ್ಲಿಸಬಹುದು. ವಾರ್ಡ್‌ನಲ್ಲಿನ ಗುಂಡಿ ಮುಚ್ಚುವುದು, ಚರಂಡಿಗಳ ಹೂಳು ತೆಗೆಯುವುದು, ಬೀದಿದೀಪ, ನೀರಿನ ಪೈಪ್ ಲೈನ್ ಸೋರಿಕೆ, ನೀರು ಸರಬರಾಜಿನ ಸಮಸ್ಯೆ, ಕಸ ತೆಗೆಯುವುದು, ರಸ್ತೆ, ಚರಂಡಿ ಸ್ವತ್ಛಗೊಳಿಸುವುದು, ಬೀದಿ ನಾಯಿ, ಕೋತಿ, ಹಂದಿ ಹಾವಳಿ, ರಸ್ತೆ ಸಣ್ಣಪುಟ್ಟ ದುರಸ್ತಿ, ಪ್ರಾಣಿಗಳ ಮೃತದೇಹ ವಿಲೇವಾರಿ ಸೇರಿದಂತೆ 14 ಬಗೆಯ ಸಮಸ್ಯೆಗಳ ಕುರಿತು ದೂರು ನೀಡಬಹುದು.
ದೂರು ನೀಡುವ ವಿಧಾನ ಹೀಗಿದೆ: ಮೊಬೈಲ್ ಗ್ಯಾಲರಿಯಲ್ಲಿರುವ ಫೋಟೊಗಳನ್ನು ಆ್ಯಪ್ ತೆಗೆದುಕೊಳ್ಳುವುದಿಲ್ಲ. ಎಲ್ಲಿಯದೋ ಫೋಟೋ ತಂದು ಮತ್ತಿನ್ನೆಲ್ಲೋ ಸಮಸ್ಯೆ ಇದೆ ಎಂಬಂತೆ ಸುಳ್ಳು ದೂರು ದಾಖಲಿಸುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಜಿಪಿಎಸ್ ಮೂಲಕ ಸ್ಥಳದಲ್ಲೇ ಫೋಟೋ ತೆಗೆದು ಅಪ್ಲೋಡ್ ಮಾಡಲು ಆ್ಯಪ್‌ನಲ್ಲಿ ವಿನ್ಯಾಸ ಮಾಡಲಾಗಿದೆ. ಆ್ಯಪ್‌ನಲ್ಲಿ ಸಲ್ಲಿಕೆಯಾಗುವ ಪ್ರತಿ ದೂರಿಗೂ ಒಂದು ಸಂಖ್ಯೆ ನೀಡಲಾಗುತ್ತದೆ. ಆ್ಯಪ್‌ನಲ್ಲಿ ದೂರಿನ ಸ್ಥಿತಿಗತಿ ಪರಿಶೀಲಿಸಬಹುದು.
ಹಿತೈಶಿ ಆ್ಯಪ್ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆ್ಯಪ್ ಮೂಲಕ ಈವರೆಗೆ 87 ದೂರು ದಾಖಲಾಗಿ, ಸಮಸ್ಯೆ ಇತ್ಯರ್ಥಪಡಿಸಲಾಗಿದೆ. ಹೆಚ್ಚು ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಮಸ್ಯೆ ಪರಿಹರಿಸಿಕೊಳ್ಳಬೇಕು.
ಆರ್.ವಿನೋತ್ ಪ್ರಿಯಾ,
ಜಿಲ್ಲಾಧಿಕಾರಿ.
ಹಿತೈಶಿ ಆ್ಯಪ್‌ನಲ್ಲಿ ದೂರು ದಾಖಲಾದ 24 ಗಂಟೆಯೊಳಗೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ನಿರ್ವಹಣಾ ಸಿಬ್ಬಂದಿ ದೂರಿಗೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಆ ದೂರು ಆ ಸಂಸ್ಥೆಯ ಮುಖ್ಯಾಧಿಕಾರಿಗೆ ರವಾನೆಯಾಗುತ್ತದೆ. ಅಲ್ಲಿಯೂ 24 ಗಂಟೆಯೊಳಗೆ ಪರಿಹಾರ ಸಿಗದಿದ್ದರೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ದೂರು ರವಾನೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ರವಿಶಂಕರ್,
ಆ್ಯಪ್ ಸಿದ್ಧಪಡಿಸಿದ ಎನ್‌ಐಸಿ ಅಧಿಕಾರಿ
ತಿಪ್ಪೇಸ್ವಾಮಿ ನಾಕೀಕೆರೆ