ಚಿತ್ರದುರ್ಗ: ಭೀಮಸಮುದ್ರ-ಚಿತ್ರದುರ್ಗ ಮಾರ್ಗದಲ್ಲಿ ಅದಿರು ಲಾರಿಗಳನ್ನು ಸಂಪೂರ್ಣ ನಿರ್ಬಂಧಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಹಿರೇಗುಂಟನೂರು ಹೋಬಳಿಯ ಗ್ರಾಮಗಳ ಜನರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಿರೇಗುಂಟನೂರಿನ ಹಳಿಯೂರು ಸಮೀಪ ಸೋಮವಾರ ಅದಿರು ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದು ದಂಪತಿ ಸೇರಿದಂತೆ ಮೂವರನ್ನು ಬಲಿ ತೆಗೆದುಕೊಂಡಿದೆ. ಅಪಘಾತದಲ್ಲಿ ಏಳು ತಿಂಗಳ ತುಂಬು ಗರ್ಭಿಣಿ, ಪತಿ, ಮತ್ತೂಬ್ಬ ಯುವಕ ಸೇರಿದಂತೆ ಗರ್ಭದಲ್ಲಿದ್ದ ಶಿಶು ಕೂಡ ಹೊರಗಿನ ಪ್ರಪಂಚವನ್ನು ನೋಡುವ ಮುನ್ನವೇ ಬಲಿಯಾಗಿದ್ದಾರೆ. ಒಟ್ಟು ನಾಲ್ಕು ಅಮಾಯಕರ ಜೀವ ಬಲಿ ತೆಗೆದುಕೊಂಡಿರುವ ಅದಿರು ಕಂಪನಿ ಯಾವುದೇ ಕಾರಣಕ್ಕೂ ಬೇಡ ಎಂದು ಪ್ರತಿಭಟನಾಕಾರರು ತಿಳಿಸಿದರು.
ಹಿರೇಗುಂಟನೂರು ಹೋಬಳಿಯ ಭೀಮಸಮುದ್ರದ ಬಳಿ ವೇದಾಂತ ಲಿಮಿಟೆಡ್ ಕಂಪನಿಯವರು ಅದಿರು ಸಾಗಾಣಿಕೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ಲಾರಿಗಳು ಭೀಮಸಮುದ್ರ ರಸ್ತೆಯಲ್ಲಿ ಸಂಚರಿಸುತ್ತಿವೆ. ಅನೇಕ ಬಾರಿ ಅಪಘಾತಗಳಾಗಿ ಸಾವು-ನೋವು ಸಂಭವಿಸಿದರೂ ಅದಿರು ಸಾಗಿಸುವ ಕಂಪನಿಯ ಲಾರಿಗಳು ಮಾರ್ಗವನ್ನು ಬದಲಾಯಿಸುತ್ತಿಲ್ಲ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸದೇ ಇರುವುದರಿಂದ ಮೇಲಿಂದ ಮೇಲೆ ಅಪಘಾತಗಳುಂಟಾಗಿ ಮುಗ್ಧರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.
ಅಪಘಾತದಲ್ಲಿ ಮಹಂತೇಶ್ ನಾಯ್ಕ, ಪತ್ನಿ ದೀಪಾಬಾಯಿ ಹಾಗೂ ದೀಪಾಬಾಯಿ ಅಣ್ಣನ ಮಗ ಚೇತನ್ ಮೃತಪಟ್ಟಿದ್ದಾರೆ. ಜೀವಕ್ಕೆ ಎಷ್ಟು ಬೆಲೆ ಕಟ್ಟಿದರೂ ಸಾಲದು. ಆದರೂ ಮೃತ ಜೀವಗಳಿಗೆ ಕನಿಷ್ಠ ತಲಾ ಒಂದೊಂದು ಕೋಟಿ ರೂ. ಪರಿಹಾರ ನೀಡಬೇಕೆಂದು ಪಟ್ಟು ಹಿಡಿದರು.
ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ಒನಕೆ ಓಬವ್ವ ವೃತ್ತ ಹಾಗೂ ಜಿಲ್ಲಾಧಿಕಾರಿ ಬಂಗಲೆ ಕಡೆಯಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹೊರಗೆ ಪ್ರತಿಭಟನೆ ನಡೆಯುತ್ತಿದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರೈತ ಸಂಘ ಹಾಗೂ ಹಿರೇಗುಂಟನೂರು ಗ್ರಾಮದ ಮುಖಂಡರು ಮತ್ತು ವೇದಾಂತ ಗಣಿ ಕಂಪನಿ ಪ್ರತಿನಿಧಿಗಳ ಮಧ್ಯೆ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಕುರಿತು ಚರ್ಚೆ ನಡೆಯಿತು.
ಅಖೀಲ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾಧ್ಯಕ್ಷ ಕೆ.ಜಿ. ಅನಂತಮೂರ್ತಿ ನಾಯ್ಕ, ಕನ್ನಡಸೇನೆ ಜಿಲ್ಲಾಧ್ಯಕ್ಷ ರಮೇಶ್, ಗೋವಿಂದ ನಾಯ್ಕ, ತಿಪ್ಪೇಶ್ ನಾಯ್ಕ, ಕುಮಾರ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜೀವದ ಬೆಲೆಯೇ ಗೊತ್ತಿಲ್ಲವೇ?
ಅಧಿಕಾರಿಗಳಿಗೆ, ಗಣಿ ಕಂಪನಿಗಳಿಗೆ ಜನರ ಜೀವದ ಬೆಲೆಯೇ ಗೊತ್ತಿಲ್ಲ. ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅದಿರು ತುಂಬಿದ ಲಾರಿಗಳು ಕಿರಿದಾದ ರಸ್ತೆಯಲ್ಲಿ ಅತಿ ವೇಗವಾಗಿ ಸಂಚರಿಸುತ್ತಿವೆ. ಶಾಲಾ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ರಸ್ತೆ ದಾಟುವುದೇ ಕಷ್ಟವಾಗಿದೆ. ಅಧಿಕಾರಿಗಳು ಮತ್ತು ಗಣಿ ಕಂಪನಿಗಳ ಕುಟುಂಬಗಳು ಅಪಘಾತಕ್ಕೀಡಾಗಿದ್ದರೆ ಆಗ ಅವರಿಗೆ ಸಾವಿನ ನೋವು ಏನೆಂದು ತಿಳಿಯುತ್ತಿತ್ತು, ಅಮಾಯಕರ ಪ್ರಾಣ ಹೋಗುತ್ತಿರುವುದರಿಂದ ಜೀವದ ಬೆಲೆ ತಿಳಿದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.