ಚಿತ್ರದುರ್ಗ: “ರೈತರಿಗೆ ಭಾಷೆ ಕೊಟ್ಟ ಮಳೆ’ ಎಂದೇ ಕರೆಸಿಕೊಳ್ಳುವ ಉತ್ತರೆ ಮಳೆ ಜಿಲ್ಲೆಯಾದ್ಯಂತ ತಂಪೆರೆಯುತ್ತಿದೆ. ಉತ್ತರೆ ಮಳೆ ಬಂದರೆ ಕುಡಿಯಲು ನೀರಾದರೂ ಸಿಗುತ್ತದೆ, ಒಂದು ವೇಳೆ ಕೈಕೊಟ್ಟರೆ ಮುಂದೆ ನೀರಿಗೆ ಹಾಹಾಕಾರ ಉಂಟಾಗಲಿದ್ದು, ಗುಳೆ ಹೊರಡಲು ಅಣಿಯಾಗಬೇಕಾಗುತ್ತದೆ ಎನ್ನುತ್ತಾರೆ ಬಯಲುಸೀಮೆಯ ಜನ.
ಈ ಹಿನ್ನೆಲೆಯಲ್ಲಿ ಈಗ ಸುರಿಯುತ್ತಿರುವ ಉತ್ತರೆ ಮಳೆ ಜಿಲ್ಲೆಯ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಸಕಾಲಕ್ಕೆ ಸರಿಯಾಗಿ ಮಳೆಯಾಗದೆ ಈಗಾಗಲೇ ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯವಾಗದ ರೈತರು ಮುಂದೆ ದನ ಕರುಗಳಿಗೆ ಮೇವಾದರೂ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ತಡವಾಗಿ ಬಂದ ಮಳೆಗೆ ಮೆಕ್ಕೆಜೋಳ, ಹತ್ತಿ, ರಾಗಿ, ಈರುಳ್ಳಿ, ಸಿರಿಧಾನ್ಯಗಳನ್ನು ಬಿತ್ತನೆ ಮಾಡಿರುವ ರೈತರಿಗೆ ಈ ಮಳೆ ಸಂತಸ ತಂದಿದೆ. ಸೋಮವಾರ ರಾತ್ರಿಯಿಂದ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹಾಗೂ ಹಿರಿಯೂರು ತಾಲೂಕಿನ ಧರ್ಮಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದೆ ಎನ್ನಲಾಗಿದ್ದು, ಈ ಭಾಗದ ಸಣ್ಣ ಪುಟ್ಟ ಕೆರೆ ಕಟ್ಟೆಗಳು ತುಂಬಿ ನೀರು ಹರಿದಿದೆ.