Advertisement

ಕಡಲೆಗೆ ಸಂಕಷ್ಟ ತಂದಿಟ್ಟ ಮಳೆ

03:35 PM Nov 11, 2019 | |

„ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ
: ಬರದ ಬವಣೆಯಲ್ಲಿದ್ದ ಜಿಲ್ಲೆಯ ಜನರ ಬದುಕಿಗೆ ತಂಪೆರೆಯಲು ಸುರಿದ ಮಳೆರಾಯ ಕಡಲೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾನೆ. ಇದ್ದಕ್ಕಿದ್ದಂತೆ ಅತಿಯಾಗಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿತ್ತು. ಈಗ ಹಿಂಗಾರು ಬೆಳೆ ಕಡಲೆಗೂ ಮಳೆರಾಯನ ಹೊಡೆತ ಬಿದ್ದಿದೆ.

Advertisement

ಸಾಧಾರಣವಾಗಿ ಹಸ್ತಾ ಮಳೆ ಬೀಳುತ್ತಲೇ ಕಡಲೆ ಬಿತ್ತನೆ ಪ್ರಾರಂಭವಾಗುತ್ತದೆ. ಈ ವರ್ಷ ಕೂಡ ರೈತರು ಸಾಂಪ್ರದಾಯಿಕವಾಗಿ ಇದೇ ಸಂದರ್ಭದಲ್ಲಿ ಕಡಲೆ ಬಿತ್ತಿದ್ದಾರೆ. ಆದರೆ ಇದೇ ವೇಳೆಗೆ ಜಿಲ್ಲೆಯಲ್ಲಿ ವಿಪರೀತ ಮಳೆ ಬಿದ್ದ ಪರಿಣಾಮ ತೇವಾಂಶ ಹೆಚ್ಚಾಗಿ ಕಡಲೆ ಬೆಳೆ ಹೂವು, ಮೊಗ್ಗು ಕಟ್ಟುವ ಬದಲು ಒಣಗಿ ಹೋಗಿದೆ.

ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ, ದಂಡಿನಕುರುಬರಹಟ್ಟಿ, ಬಾಲೇನಹಳ್ಳಿ, ರಾಮಜೋಗಿಹಳ್ಳಿ, ಜೆ.ಎನ್‌. ಕೋಟೆ ಮತ್ತಿತರೆ ಭಾಗದಲ್ಲಿ ಎರೆ ಜಮೀನುಗಳಲ್ಲಿ ನೀರು ಹೆಚ್ಚಾಗಿ ನಿಂತ ಪರಿಣಾಮ ನೂರಾರು ಎಕರೆ ಕಡಲೆ ಬೆಳೆ ರೋಗಕ್ಕೆ ತುತ್ತಾಗಿದೆ. ಎತ್ತರದ ಪ್ರದೇಶದಲ್ಲಿ ಹಾಗೂ ತುಸು ತಡವಾಗಿ ಮಳೆ ಇಳಿಮುಖವಾದಾಗ ಬಿತ್ತನೆ ಮಾಡಿದ ರೈತರ ಬೆಳೆಗಳು ಪರವಾಗಿಲ್ಲ ಎನ್ನುವಂತಿದ್ದರೆ, ಸತತ ಮಳೆಗೆ ಸಿಲುಕಿದ ಬೆಳೆ ಮಾತ್ರ ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತಾಗಿದೆ.

ಈ ವರ್ಷ ಮುಂಗಾರು ತಡವಾಗಿ ಕಾಲಿಟ್ಟಿದ್ದರಿಂದ ಬೇರೆ ಬೆಳೆ ಬೆಳೆಯದೇ ನಂತರ ಸುರಿದ ಮಳೆಯಿಂದ ಕಡಲೆಯನ್ನಾದರೂ ಬೆಳೆದು ಬದುಕು ಕಟ್ಟಿಕೊಳ್ಳುವ ಆಸೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಹಿಂಗಾರಿನಲ್ಲೂ ಮಳೆ ವಿಪರೀತವಾಗಿ ಕಡಲೆಗೆ ‘ಸಿಜೇರಿಯನ್‌ ವಿಲ್ಟ್’ ಎಂಬ ವೈರಸ್‌ ತಗುಲಿ ಬೇರಿನಿಂದ ಕೊಳೆಯಲು ಪ್ರಾರಂಭಿಸಿದೆ.

ಮತ್ತೆ ಬಿತ್ತನೆ ಮಾಡಬಹುದು: ಕಡಲೆ ಬಿತ್ತನೆ ಮಾಡಿ ಕೈಸುಟ್ಟುಕೊಂಡಿರುವ ರೈತರು ಈಗಾಗಲೇ ಹಾಕಿದ ಬಂಡವಾಳದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ ಬಿತ್ತನೆಗೆ ಕನಿಷ್ಠ 15 ಸಾವಿರ ರೂ. ಖರ್ಚು ತಗುಲುತ್ತದೆ. ಸಾಮಾನ್ಯವಾಗಿ ಐದರಿಂದ ಹತ್ತು ಎಕರೆವರೆಗೆ ಕಡಲೆ ಬಿತ್ತನೆ ಮಾಡಿದ್ದ ರೈತರು ಈಗಾಗಲೇ ಒಂದು ಲಕ್ಷದವರೆಗೆ ಹಣ ಸುರಿದು ಕೈ ಖಾಲಿ ಮಾಡಿಕೊಂಡಿದ್ದಾರೆ. ಈ ಹಂತದಲ್ಲಿ ಬೆಳೆ ಕೈಕೊಟ್ಟಿದ್ದರಿಂದ ನಷ್ಟದ ಸುಳಿಯಲ್ಲಿದ್ದಾರೆ. ಆದರೂ ತೇವಾಂಶ ಇರುವುದರಿಂದ ಮತ್ತೂಮ್ಮೆ ಬಿತ್ತನೆ ಮಾಡಲು ಅವಕಾಶವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next