Advertisement

ಹಸ್ತಾ ಮಳೆ ಅಬ್ಬರಕ್ಕೆ ಕೋಟೆನಾಡು ತತ್ತರ

01:43 PM Oct 03, 2019 | |

ಚಿತ್ರದುರ್ಗ: ಹಸ್ತಾ ಮಳೆಯ ಅಬ್ಬರಕ್ಕೆ ಕೋಟೆನಾಡು ಚಿತ್ರದುರ್ಗ ತತ್ತರಗೊಂಡಿದೆ. ಹಲವು ವರ್ಷಗಳ ನಂತರ ಪ್ರತಿ ದಿನ ರಾತ್ರಿ ಬಿಟ್ಟೂ ಬಿಡದೇ ಸುರಿಯುವ ಮಳೆಯಿಂದಾಗಿ ರೈತರು ಆತಂಕಗೊಂಡಿದ್ದಾರೆ.

Advertisement

ಚಿತ್ರದುರ್ಗ ತಾಲೂಕು ಲಿಂಗಾವರಹಟ್ಟಿ, ಡಿ.ಎಸ್‌. ಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಈರುಳ್ಳಿ ಜಮೀನುಗಳಲ್ಲಿ ನೀರು ನಿಂತಿದ್ದು, ಬೆಳೆ ಕೊಳೆಯುವ ಆತಂಕ ಎದುರಾಗಿದೆ. ಈರುಳ್ಳಿ ಬೆಳೆದಿರುವ ಬಹುತೇಕ ಜಮೀನುಗಳಲ್ಲಿ ಭತ್ತದ ಗದ್ದೆಯಂತೆ ನೀರು ನಿಂತಿದ್ದರಿಂದ ರೈತರು ಯಾತನೆ ಪಡುತ್ತಿದ್ದಾರೆ. ಅಪರೂಪಕ್ಕೆಂಬಂತೆ ಈರುಳ್ಳಿಗೆ ಭರ್ಜರಿ ಬೆಲೆ ಸಿಗುತ್ತಿದೆ. ಒಂದು ಹಂತದಲ್ಲಿ ರಫ್ತು ನಿಷೇಧಿಸಿ ಕೇಂದ್ರ ಸರ್ಕಾರ ರೈತರಲ್ಲಿ ದುಗುಡ ಮೂಡಿಸಿದ್ದರೆ, ಸಿಗುವ ಅಷ್ಟಿಷ್ಟು ಬೆಳೆಯೂ ನೀರುಪಾಲಾಗುವ ಆತಂಕ ಮತ್ತೂಂದೆಡೆ.

ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳ: ಜಿಲ್ಲೆಯ ವಿವಿಧೆಡೆ ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳು ಮಳೆಯಿಂದಾಗಿ ತುಂಬಿ ಹರಿಯುತ್ತಿವೆ. ವಿಶೇಷವಾಗಿ ವಾಣಿ ವಿಲಾಸ ಸಾಗರ ಸೇರುವ ಹೊಸದುರ್ಗ ತಾಲೂಕಿನ ಗುಂಡಿಹಳ್ಳಿ, ವೇದಾವತಿ ನದಿ, ದೇವಪುರದ ಹಳ್ಳಗಳಲ್ಲಿ ಭಾರೀ ನೀರು ಹರಿಯುತ್ತಿದೆ.

ಕಳೆದ ಐದಾರು ವರ್ಷಗಳಲ್ಲಿ ಕಾಣದಷ್ಟು ನೀರು ಕೆರೆ ಕಟ್ಟೆಗಳಲ್ಲಿ ಕಾಣಿಸುತ್ತಿದೆ. ರೈತರ ಜಮೀನುಗಳಲ್ಲಿ ಕಾಲಿಟ್ಟರೆ ಮೊಳಕಾಲವರೆಗೆ ಕಾಲುಗಳು ಸಿಕ್ಕಿ ಹಾಕಿಕೊಳ್ಳುವಂತೆ ಮಳೆಯಾಗಿದೆ.

ಸಿಹಿನೀರು ಹೊಂಡ ಭರ್ತಿ: ಚಿತ್ರದುರ್ಗ ನಗರದ ಬುರುಜನಹಟ್ಟಿ ಭಾಗದಲ್ಲಿರುವ ಸಿಹಿನೀರು ಹೊಂಡ ಬುಧವಾರ ಬೆಳಗಿನ ಜಾವ ಸುರಿದ ಮಳೆಗೆ ಭರ್ತಿಯಾಗಿ ಕೋಡಿ ಬಿದ್ದಿದೆ. ಚಿತ್ರದುರ್ಗ ನಗರದ ಅಂತರ್ಜಲ ವ್ಯವಸ್ಥೆಯ ಭಾಗವಾಗಿರುವ ಸಿಹಿನೀರು ಹೊಂಡ, ಸಂತೆ ಹೊಂಡಗಳು ಭರ್ತಿಯಾದರೆ ನಗರದ ಬಹುತೇಕ ಕೊಳವೆಬಾವಿಗಳು ರೀಚಾರ್ಜ್‌ ಆಗುತ್ತವೆ.

Advertisement

ಸಿಹಿನೀರು ಹೊಂಡ ಕೋಡಿ ಬಿದ್ದಿದೆ ಎಂಬ ಸುದ್ದಿ ಕೇಳಿ ನಗರದ ಜನತೆ ಕುತೂಹಲದಿಂದ ಅಲ್ಲಿಗೆ ಹೋಗಿ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಹೊಂಡದ ಕೋಡಿಯಿಂದ ಹೊರಗೆ ಹರಿಯುತ್ತಿದ್ದ ನೀರನ್ನು ಸಂತೆ ಹೊಂಡಕ್ಕೆ ಬಿಡದೇ ಮಲ್ಲಾಪುರ ಕೆರೆಗೆ ತಿರುವಿಸಿದ್ದಕ್ಕೆ ನಾಗರಿಕರು ಅಸಮಧಾನ ವ್ಯಕ್ತಪಡಿಸಿದರು. ಸಿಹಿನೀರು ಹೊಂಡದ ನೀರು ಹರಿಯುವ ಮಾರ್ಗ ಹದಗೆಟ್ಟಿದ್ದು, ನೀರು ಹರಿಯುವ ಸಾಧ್ಯತೆ ಕಡಿಮೆ.

ಕೆಲಸ ನಡೆಯುತ್ತಿದೆ ಎಂಬ ಕಾರಣಗಳನ್ನು ಹೇಳಿ ಮಲ್ಲಾಪುರ ಕೆರೆಗೆ ನೀರು ಹರಿಸಲಾಗುತ್ತಿತ್ತು. ಕೊನೆಗೆ ಜನರ ಆಕ್ರೋಶ ಹೆಚ್ಚಾದ ಕಾರಣ ನೀರು ಹರಿಯುವ ದಾರಿ ಸರಿಪಡಿಸಿ ಸಂತೆಹೊಂಡಕ್ಕೆ ನೀರು ಬಿಡಲಾಗಿದೆ.ಪ್ರತಿ ದಿನ ತಡರಾತ್ರಿ 2 ರಿಂದ 3 ಗಂಟೆ ವೇಳೆಗೆ ಆರಂಭವಾಗುವ ಮಳೆರಾಯ ಬೆಳಗ್ಗೆ ಹೊತ್ತಿಗೆ ಇಡೀ ಜಿಲ್ಲೆಯನ್ನು ತೋಯ್ದು ತೊಪ್ಪೆ ಮಾಡುತ್ತಿದ್ದಾನೆ. ಬೇಸಿಗೆಗೆ ನೀರಿನ ಸಮಸ್ಯೆ ಬಾರದು ಎನ್ನುವ ಖುಷಿ ಜನರಲ್ಲಿ ಮೂಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next