Advertisement
ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗದಲ್ಲಿ ನಿರ್ಮಿಸಿರುವ ಕ್ವಾಟ್ರರ್ಸ್ ಆವರಣವಂತೂ ಥೇಟ್ ಕೆರೆಯಂತಾಗಿತ್ತು. ವಿಪರ್ಯಾಸವೆಂದರೆ ಕೆಎಸ್‌ಆರ್‌ಟಿಸಿ ಕ್ವಾಟ್ರರ್ಸ್ ಕಡೆಯಿಂದ ನೀರು ಹರಿಯಲು ಜಾಗವೇ ಇಲ್ಲದ ಕಾರಣ ಕಾಂಪೌಂಡ್ ಬಿರುಕುಗಳಿಂದ ಭೋರ್ಗರೆದು ಬಂದ ನೀರು ಕೆಳಗೋಟೆಯ ಸಂಗಮೇಶ್ವರ ಬಡಾವಣೆಯ ಮನೆಗಳ ನಡುವೆ ಹರಿದು ಮುಂದೆ ಸಾಗಿತು. ಈ ವೇಳೆ ಹಲವು ಮನೆಗಳ ಮುಂದೆ ಮೊಳಕಾಲುದ್ದ ನೀರು ನಿಂತು ಮನೆಯಿಂದ ಹೊರಗೆ ಬರುವುದು ಕಷ್ಟವಾಗಿತ್ತು.
ಪಾದಾಚಾರಿಗಳು ಪರದಾಡಿದರು. ರಾತ್ರಿ 7:30ರ ಹೊತ್ತಿಗೆ ಪ್ರಾರಂಭವಾದ ವರುಣನ ಆರ್ಭಟ ರಾತ್ರಿ 9:30 ರವರೆಗೂ ಇತ್ತು. ಇನ್ನೇನು ಮಳೆ ನಿಂತಿದೆ ಎಂದು ಕೈಯಲ್ಲಿ ಛತ್ರಿ ಹಿಡಿದು ಹೊರಗೆ ಕಾಲಿಡುವಷ್ಟರಲ್ಲಿ ಮತ್ತೆ ಸುಮಾರು ಒಂದೂವರೆ ತಾಸು ಸುರಿಯಿತು. ಯಾವುದೂ ವ್ಯವಸ್ಥಿತವಾಗಿಲ್ಲದ ಊರು ಚಿತ್ರದುರ್ಗದಲ್ಲಿ ಹೀಗೆ ಮಳೆ ವಿಪರೀತವಾದರೆ ಇನ್ನೂ ನೂರು ಸಮಸ್ಯೆಗಳು ಉದ್ಭವಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಸಾಮಾನ್ಯವಾಗಿ ಕುಡಿಯುವ ನೀರಿಗೂ ಪರದಾಡುವ ಊರಿನಲ್ಲಿ ಮಳೆ ಬಂದರೆ ಸಾಕಪ್ಪ ಎನ್ನುವುದು ಬಹುತೇಕರ ಪ್ರಾರ್ಥನೆ ಆಗಿರುತ್ತದೆ. ಆದರೆ ತಗ್ಗು ಪ್ರದೇಶಗಳಲ್ಲಿ, ದಿಕ್ಕು ತಪ್ಪಿ ಹರಿಯುವ ನೀರಿನ ಸೆಳವಿಗೆ ಸಿಗುವ ಜಾಗಗಳಲ್ಲಿ ಮನೆ ಕಟ್ಟಿಕೊಂಡವರು ಯಾಕಪ್ಪ ಮಳೆ ಬರುತ್ತೆ ಎನ್ನುವುದೂ ಉಂಟು. ಮಳೆಯೇ ಬರುವುದಿಲ್ಲ ಎನ್ನುವಂತೆ ಪ್ಲಾನ್ ಮಾಡಿ, ಚರಂಡಿ, ಸೇತುವೆ, ಮನೆ ಕಟ್ಟುವ ಆಡಳಿತ ವ್ಯವಸ್ಥೆಗೆ ಉತ್ತರೆ ಮಳೆ ಸರಿಯಾದ ಪಾಠ ಕಲಿಸುವಂತೆ ಕಾಣಿಸುತ್ತಿದೆ.