ಚಿತ್ರದುರ್ಗ: ಐತಿಹಾಸಿಕ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಕೋವಿಡ್ ಮುಕ್ತವಾಗಿದ್ದು, ಪುನಃ ಹಸಿರು ವಲಯಕ್ಕೆ ಬಂದಿದೆ. ಕೋವಿಡ್ -19 ಸೋಂಕಿನಿಂದ ಗುಣಮುಖರಾದ 12 ಜನರನ್ನು ಬುಧವಾರ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೋವಿಡ್ ಹೆಲ್ತ್‌ಕೇರ್ ಸೆಂಟರ್ ನಿಂದ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಜಿಲ್ಲೆ ಸಂಪೂರ್ಣ ಸೋಂಕು ಮುಕ್ತವಾಗಿದೆ.
ಕೋವಿಡ್ ಸೋಂಕು ದೃಢಪಟ್ಟಿದ್ದ ಪಿ-2232, ಪಿ-2239, ಪಿ-2240, ಪಿ-2241, ಪಿ-2242, ಪಿ-2244, ಪಿ-2245, ಪಿ-2246, ಪಿ-2249, ಪಿ-2455, ಪಿ-2456, ಪಿ-2457 ಸೇರಿದಂತೆ ಒಟ್ಟು 12 ಮಂದಿ ಸೋಂಕಿ ನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದರು. ಚಳ್ಳಕೆರೆ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಹಾಗೂ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೆಲ್ಲ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 40 ಪಾಸಿಟಿವ್ ಪ್ರಕರಣಗಳ ಪೈಕಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಹೊರತುಪಡಿಸಿದರೆ ಚಿತ್ರದುರ್ಗ ಜಿಲ್ಲೆ ಕೋವಿಡ್ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿದೆ.
ಜಿಲ್ಲೆಗೆ ಹೊರಗಿನ ಸೋಂಕೇ ಹೆಚ್ಚು: ರಾಜ್ಯಕ್ಕೆ ಕೋವಿಡ್ ಕಾಲಿಟ್ಟು ತಿಂಗಳುಗಳೇ ಗತಿಸಿದ್ದರೂ ಜಿಲ್ಲೆಯಲ್ಲಿ ಒಂದೂ ಸೋಂಕು ಪತ್ತೆಯಾಗಿರಲಿಲ್ಲ. ಮೇ 5 ರಂದು ಗುಜರಾತ್‌ನಿಂದ ಜಿಲ್ಲೆಗೆ ಆಗಮಿಸಿದ್ದ 15 ತಬ್ಲೀಘಿ ಸದಸ್ಯರ ಪೈಕಿ 6 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ಹಸಿರು ವಲಯದ ಪಟ್ಟ ಕಳಚಿತ್ತು. ನಂತರ ಚೆನ್ನೈನಿಂದ ಉತ್ತರಪ್ರದೇಶಕ್ಕೆ ತೆರಳುತ್ತಿದ್ದ 58 ಕಾರ್ಮಿಕರನ್ನು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದರು. ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಈ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಲಾರಿ ಚಾಲಕನಿಗೆ ಮೇ 22 ರಂದು ಸೋಂಕು ದೃಢಪಟ್ಟಿತ್ತು. ಆನಂತರ ಲಾರಿಯಲ್ಲಿದ್ದ 23 ಕಾರ್ಮಿಕರಿಗೂ ಸೋಂಕು ತಗುಲಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದರ ಜತೆಗೆ ತಮಿಳುನಾಡಿನಿಂದ ಚಳ್ಳಕೆರೆಗೆ ಆಗಮಿಸಿದ್ದ 3 ವರ್ಷದ ಬಾಲಕಿ ಹಾಗೂ ಆಕೆಯ ತಂದೆಗೆ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು. ಲಾಕ್ ಡೌನ್ ಸಡಿಲಿಕೆ ನಂತರ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಂದಿದ್ದ ಮಹಿಳೆಗೆ ಮೇ 30 ರಂದು ಸೋಂಕು ತಗುಲಿತ್ತು. ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಗುಣಮುಖರಾಗಿ ಬಿಡುಗಡೆಯಾದರು. ಸದ್ಯ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆ ಕೋವಿಡ್ ಮುಕ್ತವಾಗಿದೆ .