Advertisement

ಶೋಷಿತರು ಸಮಾಜದ ಮುಖ್ಯವಾಹಿನಿಗೆ ಬರಲಿ

01:16 PM Jul 19, 2019 | Naveen |

ಚಿತ್ರದುರ್ಗ: ಶೋಷಿತ ಮತ್ತು ತಳ ಸಮುದಾಯಗಳು ಶೈಕ್ಷಣಿಕವಾಗಿ ಮುಂದೆ ಬಂದರೆ ಸಾಮಾಜಿಕ, ಆರ್ಥಿಕವಾಗಿ ಬಲಗೊಳ್ಳಬಹುದು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ| ಶಾಂತವೀರ ಸ್ವಾಮೀಜಿ ಹೇಳಿದರು.

Advertisement

ನಗರದ ಹೊರವಲಯದ ದಾವಣಗೆರೆ ರಸ್ತೆಯಲ್ಲಿನ ಭೋವಿ ಗುರುಪೀಠದ ಆವರಣದಲ್ಲಿ ಓಡ್‌ ಕಮ್ಯೂನಿಟಿ ಕೌನ್ಸಿಲ್ ಆಫ್‌ ಇಂಡಿಯಾ (ಓಸಿಸಿಐ) ವತಿಯಿಂದ ಭೋವಿ ಜನೋತ್ಸವ ಹಾಗೂ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ 34ನೇ ವಸಂತೋತ್ಸದ ಅಂಗವಾಗಿ ಗುರುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಹಿಂದುಳಿದ, ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸದೇ ಇದ್ದರೆ ಆ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಭೋವಿ ಗುರುಗಳು ಸಾಕಷ್ಟು ಪ್ರವಾಸ ಮಾಡಿ ಸಮುದಾಯಕ್ಕೆ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಭೋವಿ ಸಮಾಜದ ಏಳ್ಗೆ, ಆರೋಗ್ಯವೂ ಅಷ್ಟೇ ಮುಖ್ಯ. ಅನಾರೋಗ್ಯದ ನಡುವೆಯೂ ಸಮಾಜದ ಜಾಗೃತಿ ಮಾಡುವುದನ್ನು ಬಿಟ್ಟಿಲ್ಲ. ಪ್ರತಿಯೊಬ್ಬರಲ್ಲೂ ಒಳ್ಳೆಯತನ ಹುಡುಕುವ ಅವರು ಧನಾತ್ಮಕ ಚಿಂತನೆಯುಳ್ಳ ಹೃದಯವಂತಿಕೆ ಹೊಂದಿದ್ದಾರೆ ಎಂದು ಬಣ್ಣಿಸಿದರು.

ಸನ್ಯಾಸಿಯ ಸ್ವತ್ತು ಸಮಾಜದ ಸ್ವತ್ತಾದರೆ ವ್ಯಕ್ತಿಯ ಸ್ವತ್ತು ಅವನ ಕುಟುಂಬದ ಸ್ವತ್ತು. ಸ್ವಾಮೀಜಿಗಳು ತಿರುಕರಂತೆ ತಿರುಗಾಡಿ ಉಳ್ಳವರಿಂದ ಪಡೆದು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾರೆ. ದೇಹಕ್ಕೆ ರೋಗ ಬರುತ್ತೆ, ಆದರೆ ಮನಸ್ಸಿಗೆ ಬರಬಾರದು ಎನ್ನುವ ಉದ್ದೇಶ ಹೊಂದಿ ಶ್ರೀಗಳು ಸಮುದಾಯದ ಸಂಘಟನೆಗಾಗಿ ದುಡಿಯುತ್ತಿದ್ದಾರೆ. ಭೋವಿ ಸಮುದಾಯ ಸಂಘಟಿತರಾಗಿ ಎಂಟತ್ತು ಶಾಸಕರನ್ನು ಹೊಂದಿದೆ. ನೀವು ಸುಸಂಸ್ಕೃತರಾಗಿ ಬಾಳುತ್ತಿರುವುದಕ್ಕೆ ಸ್ವಾಮೀಜಿ ಕೊಡುಗೆ ಸಾಕಷ್ಟಿದೆ. ಶ್ರೀಗಳ ವಯಸ್ಸು ಚಿಕ್ಕದಾದರೂ ಹೃದಯ ದೊಡ್ಡದು. ಎಲ್ಲರಿಗೂ ತಾಯಿ ಹೃದಯ ತೋರಿದವರು. ರಾಜ್ಯದ 150ಕ್ಕೂ ಹೆಚ್ಚು ಮಠಗಳಿಗೆ ಬಿಡಾರ ಎಂದರೆ ಭೋವಿ ಗುರುಪೀಠ ಎಂದರು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ಬುದ್ಧ, ಬಸವಾದಿ ಶರಣರು ಸರ್ವ ಕಾಲಕ್ಕೂ ಮಾದರಿಯಾಗಿರುತ್ತಾರೆ. ಅವರ ಚಿಂತನೆಗಳು ಇನ್ನೂ ಹತ್ತು ಶತಮಾನಗಳು ಕಳೆದರೂ ಮಾಸುವುದಿಲ್ಲ. ಬಸವಾದಿ ಶರಣರ ಮಾರ್ಗ ಅನುಸರಿಸಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.

Advertisement

ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಸಿದ್ಧರಾಮೇಶ್ವರ ಶ್ರೀಗಳು ಒಂದು ಸಮುದಾಯವನ್ನು ಆರೋಗ್ಯಕರವಾಗಿಡಲು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಇಡೀ ದೇಶ ಸುತ್ತಿ ಸಮಾಜವನ್ನು ಸಂಘಟಿಸುತ್ತಿದ್ದಾರೆ. ಅವರು ಭೋವಿ ಗುರುಪೀಠಕ್ಕೆ ಮಾತ್ರ ಸ್ವಾಮೀಜಿಯಲ್ಲ, ಇಡೀ ಜನ ಸಮೂಹಕ್ಕೆ ಸ್ವಾಮೀಜಿಗಳಾಗಿದ್ದಾರೆ ಎಂದರು.

ಓಸಿಸಿಐ ರಾಜ್ಯಾಧ್ಯಕ್ಷ ಎಚ್.ಆನಂದಪ್ಪ ಮಾತನಾಡಿ, ಸಮುದಾಯದ ಎಲ್ಲರೂ ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು. ಸಮಾಜ ಇನ್ನಷ್ಟು ಒಗ್ಗಟ್ಟಾಗಬೇಕು ಎಂದು ತಿಳಿಸಿದರು. ಸಮಾಜದ ಮುಖಂಡ ನೇರ್ಲಗುಂಟೆ ರಾಮಪ್ಪ ಮಾತನಾಡಿ, ಭೋವಿ ಸಮುದಾಯ ಅನಾಗರಿಕತೆಯಿಂದ ನಾಗರಿಕತೆ ಕಡೆಗೆ ಬಂದಿದೆ. ಅದಕ್ಕೆ ಸಿದ್ಧರಾಮೇಶ್ವರ ಸ್ವಾಮೀಜಿಯವರೇ ಕಾರಣ ಎಂದು ಹೇಳಿದರು.

ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಅನ್ನದಾನಿ ಸ್ವಾಮೀಜಿ, ಶ್ರೀ ಬಸವ ಮಹಲಿಂಗ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಓಡ್‌ ಕಮ್ಯೂನಿಟಿ ಕೌನ್ಸಿಲ್ ಆಫ್‌ ಇಂಡಿಯಾದ ಮುಖಂಡ ಡಾ| ಎಚ್. ರವಿ ಮಾಕಳಿ, ಜಗದೀಶ್‌, ಗಂಗಪ್ಪ, ವೆಂಕಟೇಶಲು, ಜಗನ್ನಾಥ್‌, ಯಲ್ಲಪ್ಪ, ಮೋಹನ್‌ ಕೃಷ್ಣ ಮತ್ತಿತರರು ಇದ್ದರು. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ 34ನೇ ವಸಂತೋತ್ಸವದ ಅಂಗವಾಗಿ ಭೋವಿ ಸಮುದಾಯದ ಮುಖಂಡರು 47 ಲಕ್ಷ ರೂ. ಮೌಲ್ಯದ ಕಾರನ್ನು ಸ್ವಾಮೀಜಿಗೆ ಉಡುಗೊರೆಯಾಗಿ ನೀಡಿ ಗುರುವಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next