Advertisement
ಚಿತ್ರದುರ್ಗ: ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಸರ್ಕಾರಗಳು ಸ್ವಚ್ಛ ಭಾರತ ಮಿಷನ್ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಇನ್ನಿಲ್ಲದ ಹರಸಾಹಸ ಮಾಡುತ್ತಿವೆ. ಆದರೆ ಅನುಷ್ಠಾನ ಮಾಡಬೇಕಾದ ಅಧಿಕಾರಿಗಳು ಎಲ್ಲವನ್ನೂ ಕಡತಗಳಲ್ಲೇ ಮುಗಿಸಿ ವ್ಯವಹಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸರ್ಕಾರದ ಪ್ರಯತ್ನ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗಿದೆ.
Related Articles
Advertisement
ನಮ್ಮ ಹೆಸರಿನಲ್ಲಿ ಈಗಾಗಲೇ ಶೌಚಾಲಯ ಕಟ್ಟಿರುವುದಾಗಿ ಬಿಲ್ ಮಾಡಿಸಿಕೊಂಡಿದ್ದಾರಂತೆ, ಆದರೆ ನಾವು ಶೌಚಾಲಯವನ್ನೇ ಕಟ್ಟಿಸಿಕೊಂಡಿಲ್ಲ, ನಮ್ಮ ಹೆಸರಿನಲ್ಲಿ ಬೋಗಸ್ ಬಿಲ್ ಮಾಡಿಕೊಂಡಿದ್ದಾರೆ ಎಂದು ತಾಪಂ ಇಒ ಕೃಷ್ಣಾ ನಾಯ್ಕ ಅವರಿಗೆ ದೂರು ನೀಡಿದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ: ಪೇಲೂರಹಟ್ಟಿಯ ಪಾಪಯ್ಯ ಮತ್ತಿತರರು ಶೌಚಾಲಯ ನಿರ್ಮಿಸಿಕೊಳ್ಳುವ ಉದ್ದೇಶದಿಂದ ಬೆಳಗಟ್ಟ ಗ್ರಾಪಂ ಕಚೇರಿಗೆ ತೆರಳಿ ಮನವಿ ಮಾಡಿದ್ದಾರೆ. ಈ ವೇಳೆ ಪರಿಶೀಲಿಸಿದ ಗ್ರಾಪಂ ಅಧಿಕಾರಿಗಳು ಈಗಾಗಲೇ ನೀವು ಶೌಚಾಲಯ ಕಟ್ಟಿಸಿಕೊಂಡಿದ್ದಿರಿ, ನಿಮ್ಮ ಹೆಸರಿನಲ್ಲಿ ಬಿಲ್ ಆಗಿದೆ ಎಂದು ತಿಳಿಸಿದ್ದಾರೆ. ಇದೇ ರೀತಿ ಇನ್ನೂ ಹಲವು ಜನರ ಹೆಸರಿನಲ್ಲಿ ಬಿಲ್ ಆಗಿರುವುದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಪೇಲೂರಹಟ್ಟಿ ಗ್ರಾಮದ ಬಸಣ್ಣ, ಸೂರಪಾಪಯ್ಯ, ಕೆ.ಪಿ. ಸುರೇಂದ್ರ, ಚಿದಾನಂದ, ಪಾಪಮ್ಮ, ಮಂಗಳಮ್ಮ, ತಿಪ್ಪೇಸ್ವಾಮಿ ಸೇರಿದಂತೆ ಸುಮಾರು 50ಕ್ಕಿಂತ ಹೆಚ್ಚು ಜನ ತಾಪಂ ಕಚೇರಿ ಬಳಿ ಆಕ್ರೋಶ ವ್ಯಕ್ತಪಡಿಸಿದರು.
ಮೃತಪಟ್ಟವರ ಹೆಸರಲ್ಲೂ ಶೌಚಾಲಯ ನಿರ್ಮಾಣ: ಇನ್ನೂ ವಿಚಿತ್ರ ಅಂದರೆ ಈಗಾಗಲೇ ಮೃತಪಟ್ಟವರನ್ನು ಫಲಾನುಭವಿಗಳನ್ನಾಗಿ ಮಾಡಿ ಅವರ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಹಣ ಗುಳುಂ ಮಾಡಲಾಗಿದೆ. ಪೇಲಾರಹಟ್ಟಿಯ ಪಾಲಮ್ಮ ಓಬಯ್ಯ, ತಿಪ್ಪೇಸ್ವಾಮಿ ಎಂಬುವವರು ಮೃತಪಟ್ಟಿದ್ದಾರೆ. ಆದರೆ ಶೌಚಾಲಯ ನಿರ್ಮಿಸಿರುವವರ ಪಟ್ಟಿಯಲ್ಲಿ ಅವರ ಹೆಸರುಗಳುಇವೆ ಎಂದು ಗ್ರಾಮಸ್ಥರು ದೂರಿದ್ದಾರೆ. ತನಿಖೆಗೆ ಐದು ಜನರ ತಂಡ ರಚನೆ: ಬೆಳಗಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಶೌಚಾಲಯಗಳಿಗೆ ಮಾಡಿರುವ ಹಣ ಪಾವತಿ ಬಗ್ಗೆ ಕೂಲಂಕುಷ ತನಿಖೆ ನಡೆಸಲು ತನಿಖಾ ತಂಡ ನೇಮಿಸಲಾಗಿದೆ. ಮೇ 2019 ರಿಂದ ಇದುವರೆಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ತನಿಖೆ ನಡೆಸಿ ಅಕ್ಟೋಬರ್ 31 ರ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ. ಹೊಸಚೂರಿಹಟ್ಟಿ, ಪೇಲಾರಹಟ್ಟಿ ಗ್ರಾಮಗಳ ಗ್ರಾಮಸ್ಥರು ಶೌಚಾಲಯ ಕಟ್ಟದೆ ಬಿಲ್ ಮಾಡಿಕೊಂಡಿರುವ ಬಗ್ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಶೌಚಾಲಯಗಳ ಕುರಿತು ತನಿಖೆ ನಡೆಸಲು ತನಿಖಾ ತಂಡ ರಚಿಸಲಾಗಿದೆ ಎಂದು ತಾಪಂ ಇಒ ಕೃಷ್ಣಾ ನಾಯ್ಕ ಮಾಹಿತಿ ನೀಡಿದ್ದಾರೆ. ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಚಿಕ್ಕಬೆನ್ನೂರು ಮತ್ತು ಹುಲ್ಲೂರು ಗ್ರಾಪಂ ಕಾರ್ಯದರ್ಶಿಗಳ ಐದು ಜನರ ತಂಡ ರಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯನ್ನು ಬಹಿರ್ದೆಸೆ ಮುಕ್ತವನ್ನಾಗಿಸಲು ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮತ್ತೂಂದೆಡೆ ಶೌಚಾಲಯ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ಹಣವನ್ನು ಅಧಿಕಾರಿಗಳು ಮತ್ತು ಪ್ರಭಾವಿಗಳು ಲಪಟಾಯಿಸುತ್ತಿರುವುದು ಮಾತ್ರ ವಿಪರ್ಯಾಸ.