Advertisement

ರಂಗಭೂಮಿ ನೋಡುವ ದೃಷ್ಟಿಕೋನ ಬದಲಾಗಲಿ

03:07 PM Jun 23, 2019 | Naveen |

ಚಿತ್ರದುರ್ಗ: ರಂಗಭೂಮಿ ಎನ್ನುವುದು ಜಾತಿ, ಧರ್ಮಗಳ ಸೋಂಕಿಲ್ಲದ ಹಾಗೂ ವಿಷಯ ವಸ್ತುಗಳಿಗೆ ಜೀವ ತುಂಬುವ ಮಾತು ಮತ್ತು ಆಂಗಿಕ ನಿಲುವಾಗಿದೆ ಎಂದು ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ಹೇಳಿದರು.

Advertisement

ನಗರದ ಅರಳಿ ಯುವ ಸಂವಾದ ಕೇಂದ್ರದ ವತಿಯಿಂದ ಸೀಬಾರದ ಕೇತೇಶ್ವರ ಮಹಾಮಠದಲ್ಲಿ ರಂಗಕಲಾ ಪ್ರತಿಭೆಗಳಿಗೆ ಏರ್ಪಡಿಸಿರುವ ಎಂಟು ದಿನಗಳ ಉಚಿತ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಂಗಕಲೆ ಪರಿಕರ ವೇಷಭೂಷಣ, ಪ್ರಸಾದನಗಳ ಪೂರಕ ಬಳಕೆ, ಸತ್ವಪೂರ್ಣವಾದ ಸಾತ್ವಿಕತೆಯನ್ನು ಮೈಗೂಡಿಸಿಕೊಳ್ಳುವಿಕೆ, ನವರಸಾದಿಗಳ ಅಭಿವ್ಯಕ್ತಿಗೆ ಮುಖ್ಯ ವೇದಿಕೆಯಾಗಿದೆ. ರಂಗಭೂಮಿ ನಿಂತ ನೀರಲ್ಲ, ನಿರಂತರವಾಗಿ ಹರಿದು ಹೊಸ ಆಯಾಮಗಳನ್ನು ಆವರಿಸಿಕೊಂಡು ಒಂದಕ್ಕೆ ಮತ್ತೂಂದನ್ನು ಕೊಡುವ, ಕೊಳ್ಳುವ ಪ್ರಕ್ರಿಯೆಯನ್ನು ಬೆಳೆಸುತ್ತಲೇ ಸಾಗುತ್ತದೆ ಎಂದರು.

ರಂಗಭೂಮಿಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಪಠ್ಯಾಧಾರಿತ ಮತ್ತು ಸಾಹಿತ್ಯ ಆಧಾರಿತ ವಿಷಯ ವಸ್ತುಗಳಿಗೆ ಪ್ರಾಯೋಗಿಕವಾಗಿ ಸತತ ಅಭ್ಯಾಸದಿಂದ ಪೂರಕ ಮನ್ನಣೆ ಮತ್ತು ಅಭಿವ್ಯಕ್ತಿ ಸಿಗುವುದು ರಂಗಭೂಮಿಯಲ್ಲಿ ಮಾತ್ರ. ಆಧುನಿಕ ರಂಗಭೂಮಿ ಬದಲಾವಣೆಯ ಹಾದಿಯಲ್ಲಿದೆ. ಬದುಕಿನ ಎಲ್ಲ ಆಯಾಮಗಳ ಜವಾಬ್ದಾರಿ ಹೊತ್ತು, ವಿವೇಕ, ಜಾಣತನ, ಆತ್ಮವಿಮರ್ಶೆ, ಬುದ್ಧಿಕೌಶಲ್ಯಗಳ ಸಮೃದ್ಧಿಗೆ ಕೈಜೋಡಿಸಬೇಕಿದೆ. ಉಲ್ಬಣಿಸುತ್ತಿರುವ ಸಮಸ್ಯೆಗಳಿಗೆ ರಂಗಭೂಮಿಯಿಂದ ತಕ್ಕ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಜಿಲ್ಲಾ ಪಂಚಾಯತ್‌ ಸದಸ್ಯ ನರಸಿಂಹರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಗರ ಮತ್ತು ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ರಂಗಭೂಮಿ ತರಬೇತಿ ಅವಶ್ಯಕ. ಇದರಿಂದ ಆತ್ಮಸ್ಥೈರ್ಯ, ನಂಬಿಕೆ, ವಿಶ್ವಾಸ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ನರೇನಹಳ್ಳಿ ಅರುಣ್‌ಕುಮಾರ್‌ ಮಾತನಾಡಿ, ರಂಗಭೂಮಿ ಆಂದೋಲನ, ಚಳವಳಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದು ಮಹತ್ವದ ಪಾತ್ರ ನಿರ್ವಹಿಸಿದ್ದು ಇತಿಹಾಸ. ಸಮಾಜದಲ್ಲಿನ ಸಮಸ್ಯೆಗಳಿಗೆ ಮುಕ್ತಿ ನೀಡಲು ರಂಗಭೂಮಿ ಮೂಲಕ ಜಾಗೃತಿ ಮೂಡಿಸಬೇಕು ಎಂದರು.

ಅರಳಿ ಯುವ ಸಂವಾದ ಕೇಂದ್ರದ ಕಾರ್ಯದರ್ಶಿ ಕೆ. ಹೊಳೆಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದಲ್ಲಿ ರಂಗ ಆಟಗಳು, ಹಾಡು, ನೃತ್ಯ, ಮಾರ್ಷಲ್ ಆರ್ಟ್ಸ್, ಅಭಿನಯ ತರಬೇತಿ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು. ತರಬೇತಿ ಶಿಬಿರದಲ್ಲಿ ಅನುಭವಿ ರಂಗನಟರು, ಹಾಡು ಮತ್ತು ನೃತ್ಯ ಕಲಾವಿದರು, ನಿರ್ದೇಶಕರು, ಕರಾಟೆ ಪೈಟರ್‌ಗಳು ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು. ದೀಪಾ, ಮೇಘಾ, ಹನುಮೇಶ ಪ್ರಾರ್ಥಿಸಿದರು. ಶಿಬಿರದ ನಿರ್ದೇಶಕ ಆರ್‌. ಧಿಧೀಮಂತ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next