ಚಿತ್ರದುರ್ಗ: ಫಾಸ್ಟ್‌ಟ್ಯಾಗ್ ಕಡ್ಡಾಯ ಎಂಬ ಆದೇಶದ ಹಿನ್ನೆಲೆಯಲ್ಲಿ ಭಾನುವಾರ ಹಿರಿಯೂರು ತಾಲೂಕಿನ ಗುಯಿಲಾಳು ಟೋಲ್‌ನಲ್ಲಿ ಚಟುವಟಿಕೆಗಳು ಗರಿಗೆದರಿದ್ದವು. ಆದರೆ ಟೋಲ್‌ನಲ್ಲಷ್ಟೇ ಫಾಸ್ಟ್‌ಟ್ಯಾಗ್ ಖಾತೆ ಮಾಡಿಕೊಡುತ್ತಿರುವುದು ವಾಹನ ಸವಾರರ ಬೇಸರಕ್ಕೆ ಕಾರಣವಾಗಿದೆ.
ನಾಲ್ಕು ಚಕ್ರದ ಎಲ್ಲ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ ಎಂಬ ಆದೇಶ ಹೊರ ಬೀಳುತ್ತಲೇ ವಾಹನ ಸವಾರರಿಗೆ ಎಲ್ಲಾ ಕಡೆಗಳಲ್ಲಿ ಫಾಸ್ಟ್‌ಟ್ಯಾಗ್ ಖಾತೆ ತೆರೆಯಲು ಅವಕಾಶ ಮಾಡಿಕೊಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಟೋಲ್ ಪ್ಲಾಜಾ ಬಿಟ್ಟು ಬೇರೆಲ್ಲೂ ಫಾಸ್ಟ್‌ಟ್ಯಾಗ್ ಖಾತೆ ಮಾಡಿಕೊಡುತ್ತಿಲ್ಲ. ಎಲ್ಲ ಬ್ಯಾಂಕುಗಳಿಗೂ ಅಲೆದು ಸುಸ್ತಾಗಿದೆ ಎನ್ನುವುದು ಹಲವು ವಾಹನ ಸವಾರರ ಆರೋಪ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಗುಯಿಲಾಳು ಟೋಲ್ ಪ್ಲಾಜಾವನ್ನು ಪೈಲೆಟ್ ಪ್ರಾಜೆಕ್ಟ್ಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ನವೆಂಬರ್ ತಿಂಗಳಿನಿಂದಲೇ ಇಲ್ಲಿರುವ ಎಲ್ಲ ಪ್ರವೇಶ ದ್ವಾರಗಳಿಗೂ ಫಾಸ್ಟ್‌ಟ್ಯಾಗ್ ಸ್ಕ್ಯಾ ನಿಂಗ್ ಯಂತ್ರಗಳನ್ನು ಅಳವಡಿಸಲಾಗಿತ್ತು.
ಡಿ. 15 ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ ಎಂಬ ಸುದ್ದಿ ಹಿನ್ನೆಲೆಯಲ್ಲಿ ಟೋಲ್ ನಲ್ಲಿ ದಟ್ಟಣೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸರ್ಕಾರ ಈ ಅವಧಿಯನ್ನು ಇನ್ನೂ ಒಂದು ತಿಂಗಳು ಮುಂದೂಡಿದ್ದರಿಂದ ವಾಹನ ಸವಾರರು ಕೊಂಚ ನಿರಾಳವಾಗಿದ್ದರು.
ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಮಹತ್ವಕಾಂಕ್ಷೆಯ ಫಾಸ್ಟ್‌ಟ್ಯಾಗ್ ಯೋಜನೆಗೆ ವಾಹನ ಸವಾರರು ಅಷ್ಟೊಂದು ಆಸಕ್ತಿ ತೋರಿದಂತೆ ಕಾಣಿಸುತ್ತಿಲ್ಲ. ಪರಿಣಾಮ ಜಿಲ್ಲೆಯ ಟೋಲ್‌ಗಳಲ್ಲಿ ಸಂಚರಿಸುವ ವಾಹನಗಳಲ್ಲಿ ಇದುವರೆಗೆ ಶೇ. 40 ರಷ್ಟು ಮಾತ್ರ ಟ್ಯಾಗ್ ಅಳವಡಿಸಿಕೊಂಡಿವೆ. ಇನ್ನೂ ದೊಡ್ಡ ಮಟ್ಟದಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸುವುದು ಬಾಕಿ ಇದೆ. ಡಿ. 16 ರಿಂದ ಶೇ. 75 ರಷ್ಟು ಫಾಸ್ಟ್‌ಟ್ಯಾಗ್ ವಾಹನಗಳಿಗೆ ಶೇ.25 ರಷ್ಟು ಹಣ ಪಾವತಿ ಮಾಡುವ ವಾಹನಗಳಿಗೆ ಅವಕಾಶ ಮಾಡುವ ಚಿಂತನೆ ನಡೆದಿದೆ.
ಒಂದು ವೇಳೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳ ಸಂಖ್ಯೆ ಹೆಚ್ಚಾದರೆ ಮತ್ತೂಂದು ಟ್ರ್ಯಾಕ್‌ನಲ್ಲಿ ಪ್ರವೇಶ ನೀಡಬಹುದು. ಗುಯಿಲಾಳು ಟೋಲ್‌ನಲ್ಲಿರುವ ಒಂದು ಬದಿಯ 6+1 ಟ್ರ್ಯಾಕ್‌ನಲ್ಲಿ ಒಂದು ಉಚಿತ ಸೇವೆಗೆ ಮೀಸಲಿದ್ದರೆ ಉಳಿದ 6ರ ಪೈಕಿ 4 ರಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಿರುವ ವಾಹನಗಳು ಓಡಾಡಲಿವೆ. ಉಳಿದ ಎರಡು ಮಾತ್ರ ಟ್ಯಾಗ್ ಇಲ್ಲದ ವಾಹನಗಳಿಗೆ ಮೀಸಲು ಎನ್ನಲಾಗಿದೆ.