Advertisement

ತವರೂರಲ್ಲೇ ವಲಸೆ ವಿದ್ಯಾರ್ಥಿಗಳಿಗೆ ಪರೀಕ್ಷೆ

12:24 PM Jun 04, 2020 | Naveen |

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಶಿಕ್ಷಣ ಇಲಾಖೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದು, ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತಾವಿರುವ ಊರಿನ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ.

Advertisement

ಪೋಷಕರ ವಲಸೆ ಕಾರಣಕ್ಕೆ ಸಹಜವಾಗಿ ಮಕ್ಕಳ ಅಧ್ಯಯನ ಕೇಂದ್ರಗಳು ಬದಲಾಗುತ್ತಿರುತ್ತವೆ. ಇನ್ನೂ ಕೆಲವರು ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಶಾಲಾ ಕಾಲೇಜುಗಳಿರುವ ಊರುಗಳಿಗೆ ತೆರಳಿ ಅಲ್ಲಿರುವ ಪಿಜಿ, ಹಾಸ್ಟೆಲ್‌ಗ‌ಳಲ್ಲಿದ್ದು ಅಧ್ಯಯನ ಮಾಡುತ್ತಿದ್ದಾರೆ. ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಘೋಷಣೆ ಮಾಡಿದ ಕ್ಷಣದಿಂದಲೇ ಈ ಎಲ್ಲರೂ ಆತಂಕಕ್ಕೊಳಗಾಗಿದ್ದರು. ಕಾರಣ ಬಹುತೇಕ ಹಾಸ್ಟೆಲ್‌ಗ‌ಳು ಕ್ವಾರಂಟೈನ್‌ ಕೇಂದ್ರಗಳಾಗಿದ್ದವು. ಇದರಿಂದ ಪರೀಕ್ಷೆಗಾಗಿ ಬರುವ ವಿದ್ಯಾರ್ಥಿಗಳನ್ನು ಅಲ್ಲಿ ಉಳಿಸಲು ಕಷ್ಟ. ಇನ್ನೂ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಕಾರಣಕ್ಕೆ ಪರೀಕ್ಷೆಗಾಗಿ ಊರಿಂದ ಊರಿಗೆ ಬರುವಾಗ ಸೋಂಕು ತಗುಲುವ, ವ್ಯಾಪಿಸುವ ಆತಂಕಗಳಿದ್ದವು. ಆದರೆ, ಈ ಎಲ್ಲಾ ತಳಮಳಗಳಿಗೆ ಶಿಕ್ಷಣ ಇಲಾಖೆ ಅವರ ಊರುಗಳಲ್ಲೇ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿದೆ. ದೂರದ ಮಂಗಳೂರು, ಉಡುಪಿ, ಹುಬ್ಬಳ್ಳಿ, ಬೆಂಗಳೂರು, ಮೈಸೂರು ಸೇರಿದಂತೆ ಯಾವುದೇ ಊರುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈಗ ಚಿತ್ರದುರ್ಗದಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯುವ ಅವಕಾಶ ಸಿಕ್ಕಿದೆ.

ಇನ್ನೂ ಚಿತ್ರದುರ್ಗದ ಮಠ, ವಿದ್ಯಾರ್ಥಿ ನಿಲಯಗಳಲ್ಲಿದ್ದು ಅಧ್ಯಯನ ಮಾಡುತ್ತಿದ್ದ ಮಕ್ಕಳು ಕೋವಿಡ್ ಲಾಕ್‌ಡೌನ್‌ ಕಾರಣಕ್ಕೆ ದೂರದ ಊರುಗಳನ್ನು ಸೇರಿದ್ದರೆ ಅವರೂ ಕೂಡಾ ಅಲ್ಲಿಂದಲೇ ಪರೀಕ್ಷೆ ಬರೆಯಲು ಈಗಾಗಲೇ ಶಿಕ್ಷಣ ಇಲಾಖೆ ಬಳಿ ನೋಂದಾಯಿಸಿಕೊಂಡಿದ್ದಾರೆ.

12,674 ವಿದ್ಯಾರ್ಥಿಗಳ ನೋಂದಣಿ: ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಬರೋಬ್ಬರಿ 12674 ವಿದ್ಯಾರ್ಥಿಗಳು ತಾವಿರುವ ಊರಿನ ಪರೀಕ್ಷಾ ಕೇಂದ್ರದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಈ ಅಂಕಿ ಸಂಖ್ಯೆಗಳ ಆಧಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಲಸೆ ವಿದ್ಯಾರ್ಥಿಗಳಿರುವುದು ಕಂಡು ಬಂದಿದೆ.

ಇಡೀ ರಾಜ್ಯದ ವಲಸೆ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಮಂಗಳೂರು (ದ.ಕ) ಜಿಲ್ಲೆಗೆ ಹೊರಗಿನಿಂದ ಹೋಗಿ ಅಧ್ಯಯನ ಮಾಡಿ, ಈಗ ಅಲ್ಲಿಂದ ಹೊರಗಿದ್ದು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದವರ ಸಂಖ್ಯೆಯೇ ಹೆಚ್ಚಿದೆ. ಮಂಗಳೂರಿನ ಔಟ್‌ ಮೈಗ್ರೇಟೆಡ್‌ ವಿದ್ಯಾರ್ಥಿಗಳು 1318, ಇನ್ನೂ ಮಂಗಳೂರಿನಿಂದ ಹೊರಗೆ ಅಧ್ಯಯನ ಮಾಡಿ ಈಗ ಅಲ್ಲಿದ್ದು ಪರೀಕ್ಷೆ ಬರೆಯುವ ಇನ್‌ ಮೈಗ್ರೇಟೆಡ್‌ ವಿದ್ಯಾರ್ಥಿಗಳ ಸಂಖ್ಯೆ 232. ಆನಂತರದ ಸ್ಥಾನಗಳಲ್ಲಿ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಮತ್ತಿತರೆ ಜಿಲ್ಲೆಗಳಿವೆ.

Advertisement

ಚಿತ್ರದುರ್ಗದಲ್ಲಿ 349 ವಿದ್ಯಾರ್ಥಿಗಳ ನೋಂದಣಿ: ಇನ್ನೂ ಈ ಪಟ್ಟಿಯಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ 349 ವಿದ್ಯಾರ್ಥಿಗಳು ಜಿಲ್ಲೆಯಿಂದ ಹೊರಗೆ ಅಧ್ಯಯನ ಮಾಡುತ್ತಿದ್ದು, ಈಗ ಚಿತ್ರದುರ್ಗ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿದ್ದಾರೆ. ಜಿಲ್ಲೆಯಲ್ಲೇ ಅಧ್ಯಯನ ಮಾಡುತ್ತಿರುವ 271 ವಿದ್ಯಾರ್ಥಿಗಳು ವಾಪಾಸು ಹೋಗಿರುವ ತಮ್ಮ ಊರುಗಳಿಂದ ಹೆಸರು ನೋಂದಾಯಿಸಿದ್ದಾರೆ. ಈಗ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗಿಂತ 78 ಜನ ಹೆಚ್ಚಾಗುತ್ತಿದ್ದಾರೆ.

ಜಿಲ್ಲೆಯಿಂದ ಹೊರಗೆ ಹಾಗೂ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಪ್ರವೇಶಪತ್ರ (ಹಾಲ್‌ ಟಿಕೇಟ್‌)ವನ್ನು ಆಯಾ ಬಿಇಒಗಳ ಮೂಲಕ ಒದಗಿಸಲಾಗುವುದು. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಹೆಚ್ಚುವರಿ ವಿದ್ಯಾರ್ಥಿಗಳ ಪಟ್ಟಿ ಇಲಾಖೆಯಿಂದ ಬರಲಿದ್ದು, ಅವರಿಗೆ ವ್ಯವಸ್ಥೆ ಮಾಡುತ್ತೇವೆ.
ಕೆ. ರವಿಶಂಕರ ರೆಡ್ಡಿ, ಉಪನಿರ್ದೇಶಕರು,
ಸಾರ್ವಜನಿಕ ಶಿಕ್ಷಣ ಇಲಾಖೆ ಚಿತ್ರದುರ್ಗ

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next