ಚಿತ್ರದುರ್ಗ: ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಕಕ್ಕೇರು ಗ್ರಾಮದ ಬಳಿ ಆನೆ ಹೆಜ್ಜೆ ಹಾಗೂ ಲದ್ದಿ ಕಂಡು ಬಂದಿದ್ದು ಈ ಭಾಗದ ಜನರಲ್ಲಿ ಭೀತಿ ಮೂಡಿಸಿದೆ. ರೈತರು ರಾತ್ರಿ ವೇಳೆ ಜಮೀನುಗಳಿಗೆ ಹೋಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಎರಡರಿಂದ ಮೂರು ದಿನಗಳ ಹಿಂದೆ ಆನೆಯೊಂದು ಸಂಚರಿಸಿರುವ ಕುರುಹುಗಳು ಕಂಡು ಬಂದಿವೆ. ಮುಂದೆ ಯಾವ ಕಡೆ ಸಾಗಿದೆ ಎನ್ನುವುದು ಮಾತ್ರ ಗೊತ್ತಾಗಿಲ್ಲ. ಗುರುವಾರ ಇಡೀ ದಿನ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಹಾಗೂ ಹೆಜ್ಜೆಯನ್ನು ಹುಡುಕಾಡಿದ್ದು ಎಲ್ಲಿಯೂ ಹೆಜ್ಜೆ ಗುರುತು ಪತ್ತೆಯಾಗಿಲ್ಲ.
ಸಾಮಾನ್ಯವಾಗಿ ಪ್ರತಿ ವರ್ಷ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಭದ್ರಾ ಅಭಯಾರಣ್ಯದಿಂದ ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು ಮೂಲಕ ಬನ್ನೇರುಗಟ್ಟ ಅಥವಾ ಹಾಸನ ಭಾಗದ ಅರಣ್ಯ ಪ್ರದೇಶಗಳಿಗೆ ತೆರಳುವುದು ವಾಡಿಕೆ. ಈಗಾಗಲೇ ಇದನ್ನು ಆನೆ ಕಾರಿಡಾರ್ ಎಂದು ಗುರುತಿಸಲಾಗಿದ್ದು, ಆನೆ ಸಂಚರಿಸುವುದು ಜಿಲ್ಲೆಯ ಜನರಿಗೆ ಸಾಮಾನ್ಯವಾಗಿದೆ. ಆದರೆ 2017 ನವೆಂಬರ್ ತಿಂಗಳಲ್ಲಿ ಎರಡು ಆನೆಗಳು ಬಂದು ಕಾರಿಡಾರ್ ಮೂಲಕ ಸಂಚರಿಸದೆ ದಾರಿ ತಪ್ಪಿ ಹಲವರ ಜೀವಹಾನಿಗೆ ಕಾರಣವಾಗಿದ್ದವು.
ಈ ಹಿನ್ನೆಲೆಯಲ್ಲಿ ಈಗ ಬಂದಿರುವ ಆನೆಯನ್ನು ಸುಸೂತ್ರವಾಗಿ ಕಾರಿಡಾರ್ ಮೂಲಕ ಜಿಲ್ಲೆಯಿಂದ ಕಳಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಜ್ಜಾಗಿದ್ದಾರೆ. ಆನೆಗಳು ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆದು ರಾತ್ರಿ ವೇಳೆ ಪ್ರಯಾಣ ಆರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿರುವ ಹೆಜ್ಜೆಯಿಂದಾಗಿ ಈಗಾಗಲೇ ಆನೆ ಜಿಲ್ಲೆಯಿಂದ ಹೊರಗೆ ಹೋಗಿದೆಯೇ ಎನ್ನುವುದು ತಿಳಿದಿಲ್ಲ. ಇದುವರೆಗೆ ಜಿಲ್ಲೆಯಲ್ಲಿ ಯಾರ ಕಣ್ಣಿಗೂ ಆನೆ ಕಾಣಿಸಿಕೊಂಡಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಾತ್ರಿ ಕಾರ್ಯಾಚರಣೆ: ಚಿತ್ರದುರ್ಗ ಹಾಗೂ ಹಿರಿಯೂರು ವಲಯ ಅರಣ್ಯ ಇಲಾಖೆಯ ಆರ್‌ಎಫ್‌ಒ ಪ್ರದೀಪ್ ಕೇಸರಿ ಹಾಗೂ ಸಂದೀಪ್ ನೇತೃತ್ವದಲ್ಲಿ ಸುಮಾರು 100 ಸಿಬ್ಬಂದಿ ಆನೆ ಕಾರಿಡಾರ್ ಮಾರ್ಗದ ಹಳ್ಳಿಗಳಲ್ಲಿ ಗುರುವಾರ ರಾತ್ರಿಯಿಡೀ ಸಂಚರಿಸಲಿದ್ದಾರೆ.
ಎಲ್ಲಿಯೂ ಆನೆಯಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ. ಜತೆಗೆ ಈಗಾಗಲೇ ಈ ಭಾಗದ ಕೆನ್ನೆಡಲು, ಕಕ್ಕೇರು, ದೊಡ್ಡಾಪುರ, ಸೊಂಡೆಕೊಳ, ನಂದಿಪುರ, ಕುರುಮರಡಿಕೆರೆ, ಚಿಕ್ಕಸಿದ್ದವ್ವನಹಳ್ಳಿ, ಮಹಾದೇವನಕಟ್ಟೆ ಸೇರಿದಂತೆ ಹಲವು ಹಳ್ಳಿಗಳಲ್ಲಿ ಜೀಪ್‌ಗ್ಳಿಗೆ ಮೈಕ್ ಕಟ್ಟಿಕೊಂಡು ರೈತರಿಗೆ ಆನೆ ಬಂದಿರುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.