ಚಿತ್ರದುರ್ಗ: ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿರುವುದು ಸರಿಯಲ್ಲ. ಇಂಗ್ಲಿಷ್ ಜ್ಞಾನ ಭಾಷೆಯಾದರೆ ನಮ್ಮ ಆಕ್ಷೇಪವಿಲ್ಲ. ಆದರೆ ಖಾಸಗಿ ಶಾಲೆಗಳಿಂದ ಭಾಷಾ ನೀತಿ ಉಲ್ಲಂಘನೆಯಾಗುತ್ತಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ನಿಲುವು ಪ್ರಕಟಿಸಬೇಕು ಎಂದು 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ| ಬಂಜಗೆರೆ ಜಯಪ್ರಕಾಶ್ ಒತ್ತಾಯಿಸಿದರು.
15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಧ್ವಜವನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ಆರಂಭದಿಂದಲೇ ಕಲಿಸಬೇಕು. ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿಲ್ಲ. ಸರ್ಕಾರಕ್ಕೆ ಖಾಸಗಿ ಶಾಲೆಗಳನ್ನು ನಿಯಂತ್ರಿಸುವ ಶಕ್ತಿ ಇಲ್ಲ. ಕನ್ನಡ ಕಲಿಸದ ಖಾಸಗಿ ಶಾಲೆಗಳಿಗೆ ಕಡ್ಡಾಯವಾಗಿ ನವೀಕರಣ ಮಾಡಬಾರದು. ಕನ್ನಡ ಕಲಿಸದ ಶಾಲೆಗಳ ಪರವಾನಗಿಯನ್ನು ರದ್ದು ಮಾಡಬೇಕು. ಕನ್ನಡ ಕಲಿಯದಿದ್ದರೆ ಮಾನ ಉಳಿಯುವುದಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು. ರಾಜ್ಯದಾದ್ಯಂತ ಒಂದು ಸಾವಿರ ಇಂಗ್ಲಿಷ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಆದರೆ ಇಷ್ಟೇ ಪ್ರಮಾಣದ ಕನ್ನಡ ಶಾಲೆಗಳನ್ನು ಹಾಳು ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಕನ್ನಡಕ್ಕೆ ಕಂಟಕಪ್ರಾಯವಾಗಿ ಈ ಶಾಲೆಗಳು ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಳೆದ 30 ವರ್ಷಗಳಿಂದ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗ ಎಂದು ಸಾರಿಕೊಂಡು ಬರಲಾಗುತ್ತಿರುವುದು ವಿಪರ್ಯಾಸ. ಖಾಸಗಿ ಕಂಪನಿಗಳಿಗಳಲ್ಲಿರುವ 30 ಸಾವಿರ ಉದ್ಯೋಗಿಗಳಲ್ಲಿ ಕೇವಲ 1030 ಮಂದಿ ಮಾತ್ರ ಕನ್ನಡಿಗರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಭಾಷೆ, ಇಂಗ್ಲಿಷ್ ಸೇರಿದಂತೆ ಯಾವುದೇ ಭಾಷೆಯ ಅಡಿಯಾಳಾಗಬಾರದು. ಭಾಷಾ ನೀತಿ ಒಂದನೇ ತರಗತಿಯಿಂದಲೇ ಆರಂಭವಾಗಬೇಕಿದ್ದು ಇದರ ಕಡೆ ಯಾರೂ ಗಮನ ಹರಿಸುತ್ತಿಲ್ಲ. ಮಾತೃಭಾಷೆಯಲ್ಲಿ ಮಗುವಿಗೆ ನೀಡುವ ಶಿಕ್ಷಣ ಅವನನ್ನು ಪ್ರಬುದ್ಧ ವ್ಯಕ್ತಿಯನ್ನಾಗಿಸುತ್ತದೆ. ಆಳುವ ಸರ್ಕಾರಗಳು ಇದನ್ನು ಅರ್ಥ ಮಾಡಿಕೊಂಡಿಲ್ಲ ಎಂದರು.
ಕರ್ನಾಟಕದಲ್ಲಿದ್ದ ಮೇಲೆ ಕನ್ನಡವನ್ನು ಓದಿ, ಬರೆಯಬೇಕು. ಜಾನಪದ ಕತೆಗಳು, ಅಜ್ಜಿ ಕತೆಗಳು ಬದುಕು ಮತ್ತು ಸಂಸ್ಕಾರವನ್ನು ಕಲಿಸಿವೆ. ಚಿತ್ರದುರ್ಗ ಜಿಲ್ಲೆಗೆ, ಕರ್ನಾಟಕ ರಾಜ್ಯಕ್ಕೆ ಆಗಬೇಕಿರುವ ಕೆಲಸ ಕಾರ್ಯಗಳ ಕುರಿತು ಸಾಹಿತಿಗಳು ಧ್ವನಿ ಎತ್ತಬೇಕು. ಜನತೆಗಾಗಿ ನಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು. ಕನ್ನಡ ಭಾಷೆ ಪ್ರಭುತ್ವದ ಭಾಷೆಯಾಗಬೇಕು ಮತ್ತು ಶೇ. ನೂರರಷ್ಟು ಆಡಳಿತ ಭಾಷೆಯನ್ನಾಗಿಸಬೇಕು. ವರ್ಷಗಳ ಹಿಂದೆ ರಾಜಪ್ರಭುತ್ವ ಇರುವಾಗಲೇ ಕನ್ನಡ ಕಟ್ಟುವ ಬಗ್ಗೆ ಪಂಪನ ಮೂಲಕ ಕವಿರಾಜಮಾರ್ಗ ರಚಿಸಲಾಯಿತು ಎಂದು ಸ್ಮರಿಸಿದರು.