Advertisement

ಕನ್ನಡಿಗರಿಗಿಲ್ಲ ಮಾತೃಭಾಷೆ ಶಕ್ತಿಯ ಅರಿವು

12:19 PM Jul 01, 2019 | Team Udayavani |

ಚಿತ್ರದುರ್ಗ: ಕನ್ನಡ ಭಾಷಾ ವಿಷಯ ಗಂಭೀರವಾಗಿದ್ದು, ಭಾರತ ಸೇರಿದಂತೆ ವಿಶ್ವದ ಯಾವುದೇ ಭಾಷೆಗೂ ಇಲ್ಲದ ಪರಂಪರೆ ಕನ್ನಡ ಭಾಷೆಗಿದೆ. ಆದರೆ ಈ ಶಕ್ತಿಯ ಅರಿವು ಕನ್ನಡಿಗರಿಗೇ ಇಲ್ಲ ಎಂದು ಹಿರಿಯ ಸಾಹಿತಿ ಧಾರವಾಡದ ಡಾ| ರಂಜಾನ್‌ ದರ್ಗಾ ಹೇಳಿದರು.

Advertisement

ಇಲ್ಲಿನ ತರಾಸು ರಂಗಮಂದಿರದಲ್ಲಿ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.

ಭಾಷೆ ವಿಚಾರದಲ್ಲಿ ನಮ್ಮ ನಾಡು ತಲ್ಲಣದ ಸ್ಥಿತಿಯಲ್ಲಿದೆ. ಭಾಷೆಯ ಘನತೆ, ಮಹತ್ವ ತಿಳಿಯದೆ ಮಾತನಾಡುತ್ತಿದ್ದೇವೆ. ಇದು ಕೇವಲ ಕನ್ನಡಕ್ಕಷ್ಟೇ ಅಲ್ಲ, ಭಾರತದ ಎಲ್ಲ ಭಾಷೆಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಕನ್ನಡ ಭಾಷೆಯ ಶಕ್ತಿ, ಸೌಂದರ್ಯ, ಘನತೆಯನ್ನು ಮರೆಯುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ವಿಜ್ಞಾನಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃರಾಗಿದ್ದಾರೆ. ಇದ್ಯಾವುದನ್ನು ಗೌರವಿಸದೆ ಇಂದಿನ ಬಹುಪಾಲು ಪೋಷಕರು ತಮ್ಮ ಮಕ್ಕಳು ಖಾಸಗಿ ಶಾಲೆಗೆ ಸೇರಿ ಇಂಗ್ಲಿಷ್‌ ಮಾತನಾಡಬೇಕೆಂಬ ವ್ಯಾಮೋಹದಲ್ಲಿದ್ದಾರೆ. ಇದು ನಿಜಕ್ಕೂ ಕನ್ನಡಕ್ಕೆ ಅಗೌರವ ತೋರಿದಂತಾಗುತ್ತದೆ ಎಂದರು.

ಕನ್ನಡಿಗರಿಗೆ ಅನ್ಯ ಭಾಷೆಗಳ ಬಗ್ಗೆ ವಿಚಿತ್ರವಾದ ಮನೋಭಾವ ಇರುವುದರಿಂದ ಕನ್ನಡ ಭಾಷೆಯನ್ನು ಸರಿಯಾಗಿ ಕಲಿಯುತ್ತಿಲ್ಲ. ಭಾಷೆ ಎಂದರೆ ಸಂಸ್ಕೃತಿ, ಪರಂಪರೆನ ಹಾಗೂ ವಾಹನ ಇದ್ದಂತೆ. ಹಳೆಗನ್ನಡ ಸಂಪೂರ್ಣವಾಗಿ ಮರೆತು ಹೋಗಿದೆ. ಯಾವ ವಿಶ್ವವಿದ್ಯಾಲಯಗಳು ಹಳಗನ್ನಡವನ್ನು ಕಲಿಸುತ್ತಿಲ್ಲ, ಕನ್ನಡ ಭಾಷೆ ಉಳಿವಿನ ಕಡೆ ಗಮನಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪರಂಪರೆ ಎಂದರೆ ಏನು, ಅದರಿಂದ ಏನು ಪಡೆದುಕೊಂಡಿದ್ದೇವೆ. ಯಾವುದನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನು ಚಿಂತಿಸಬೇಕಿದೆ. ಒಂದು ಧರ್ಮ ಮತ್ತೂಂದು ಧರ್ಮವನ್ನು ಗೌರವಿಸುವುದೇ ಸಂಸ್ಕೃತಿ. ಕೋಮುವಾದ, ಜಾತಿ, ಧರ್ಮ ಘರ್ಷಣೆಯಲ್ಲಿ ದೇಶ ಮುಳುಗಿದೆ. ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಸಮಾನತೆ ಇನ್ನು ಕನಸಾಗಿಯೇ ಉಳಿದಿದೆ. ವಚನ ಚಳವಳಿ, ಶರಣರ ಹೋರಾಟದಲ್ಲಿ ಇತಿಹಾಸವಿದೆ. ಪಂಚೇಂದ್ರೀಯಗಳ ಮೇಲೆ ಯಾರು ವಿಜಯ ಸಾಧಿಸುತ್ತಾರೋ ಅವರು ನಿಜವಾದ ಸ್ವತಂತ್ರರು ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷ ಡಾ| ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಸಿರಿಧಾನ್ಯ, ದಾಳಿಂಬೆ, ತೊಗರಿ ಬೆಳೆಯಲು ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡಬೇಕು. ಗಣಿಗಾರಿಕೆ ಹೆಸರಿನಲ್ಲಿ ಪ್ರಕೃತಿ ನಾಶವಾಗುತ್ತಿದೆ. ನಾಶವಾಗಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು. ನದಿಯ ಒಡಲಲ್ಲಿ ಮರಳು ಎತ್ತುತ್ತಿರುವುದು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಇದರಿಂದ ನೀರಿಲ್ಲದೆ ನದಿ ಒಣಗಿದೆ. ಮರಳು ಮಾಫಿಯಾವನ್ನು ನಿಯಂತ್ರಿಸುವುದು ಸರ್ಕಾರದ ಕೆಲಸವಾಗಬೇಕು. ಐತಿಹಾಸಿಕ ಚಿತ್ರದುರ್ಗ ಜಿಲ್ಲೆ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಆದರೂ ಇಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸಲು ಆಗುತ್ತಿಲ್ಲ ಎಂದು ವಿಷಾದಿಸಿದರು.

Advertisement

ಚಿತ್ರದುರ್ಗದ ಕೋಟೆ, ಮಯೂರ ವರ್ಮನ ಶಾಸನ, ಚಂದ್ರವಳ್ಳಿ ಕೆರೆಯಿದೆ. ಮರಡಿಹಳ್ಳಿಯಲ್ಲಿ ಪಿಲ್ಲೋಲಾವ ಇದೆ. ಇಷ್ಟೆಲ್ಲವನ್ನು ಬೆಳಕಿಗೆ ತರುವ ಕೆಲಸವಾಗಬೇಕು. ಚಿತ್ರದುರ್ಗ ಬರಪೀಡಿತ ಪ್ರದೇಶವಾಗಿರುವುದರಿಂದ ಇಲ್ಲಿನ ಜನ ಕೆಲಸ ಹುಡುಕಿಕೊಂಡು ಹೋಗುವುದನ್ನು ತಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಬಿ. ಸಿದ್ದಣ್ಣ, ಜಾನಪದ ಮತ್ತು ಇತಿಹಾಸ ಸಂಶೋಧಕ ಬಾಗೂರು ನಾಗರಾಜಪ್ಪ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ದೊಡ್ಡಮಲ್ಲಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕೋಶಾಧ್ಯಕ್ಷ ಎಂ. ಗೋವಿಂದಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಆರ್‌. ದಾಸೇಗೌಡ, ಸದಸ್ಯೆ ಮೋಕ್ಷಾ ರುದ್ರಸ್ವಾಮಿ ಇದ್ದರು. ಪರಶುರಾಮ ಗೊರಪ್ಪ, ಬಾಗೂರು ನಾಗರಾಜಪ್ಪ, ಇನಾಯತ್‌, ರಾಘವೇಂದ್ರಾಚಾರ್‌, ಕೆ.ಬಿ. ಕೃಷ್ಣಪ್ಪ, ಜಾನಪದ ಪರಿಚಾರಕ ಮಹಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು. ಕೆಳಗಳಹಟ್ಟಿ ಎಚ್. ಗೋವಿಂದರಾಜು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next