ಚಿತ್ರದುರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಮಾಡುವ ಕಾರ್ಯಕ್ರಮ ರದ್ದುಗೊಂಡಿತು.
ದಿಢೀರ್ ನಿಗದಿಯಾದಷ್ಟೇ ವೇಗದಲ್ಲಿ ರದ್ದುಗೊಂಡಿದ್ದು ವಿಪರ್ಯಾಸ. ಬುಧವಾರ ಸಂಜೆ ದಿಢೀರನೇ ನಿಗದಿಯಾಗಿದ್ದ ಸಚಿವರ ವಾಸ್ತವ್ಯಕ್ಕೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇಡೀ ದಿನ ತಯಾರಿ ಮಾಡಿಕೊಂಡಿದ್ದರು. ಆದರೆ ಗುರುವಾರ ಸಂಜೆವರೆಗೂ ಅನಿಶ್ಚಿತವಾಗಿದ್ದ ವಾಸ್ತವ್ಯ ಸಂಜೆ 7 ಗಂಟೆ ಹೊತ್ತಿಗೆ ರದ್ದಾಗಿದೆ ಎಂಬ ಮಾಹಿತಿ ಸಿಕ್ಕಿತು.
ಆರೋಗ್ಯ ಇಲಾಖೆಯಿಂದ ಬಂದ ಸೂಚನೆ ಆಧರಿಸಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜಪ್ಪ, ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿದ್ದರು. ಆರೋಗ್ಯ ಖಾತೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀರಾಮುಲು ವಾಸ್ತವ್ಯ ಮಾಡುವುದರಿಂದ ಜಿಲ್ಲಾಸ್ಪತ್ರೆಯ ಬಹುತೇಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಏಕಾಏಕಿ ವಾಸ್ತವ್ಯ ಕಾರ್ಯಕ್ರಮವೇ ರದ್ದಾಗಿದ್ದರಿಂದ ಸಾರ್ವಜನಿಕರಿಗೆ ಭ್ರಮನಿರಸನವಾಗಿದೆ.
ವಿಐಪಿ ವಾರ್ಡ್‌ನಲ್ಲಿ ತಯಾರಿ: ಸಚಿವ ಶ್ರೀರಾಮುಲು ವಾಸ್ತವ್ಯ ಮಾಡಲಿದ್ದಾರೆ ಎನ್ನುವ ಕಾರಣಕ್ಕೆ ಜಿಲಾಸ್ಪತ್ರೆಯ ವಿಐಪಿ ವಾರ್ಡ್‌ನಲ್ಲಿ ಭರದ ಸಿದ್ಧತೆ ನಡೆದಿತ್ತು. ವಾರ್ಡ್‌ಗೆ ಎಸಿ ಕೂಡ ಅಳವಡಿಸಲಾಗಿತ್ತು. ಒಂದೊಮ್ಮೆ ಸಚಿವರು ನಿರ್ಧಾರ ಬದಲಿಸಿ ರೋಗಿಗಳ ಜತೆಯೇ ವಾಸ್ತವ್ಯ ಮಾಡುವ ತೀರ್ಮಾನ ಕೈಗೊಂಡರೆ ಹೇಗೆ ಎಂಬ ದೃಷ್ಟಿಯಿಂದ ಜನರಲ್ ವಾರ್ಡ್ ಹಾಗೂ ಐಸಿಯುನಲ್ಲೂ ತಯಾರಿ ಮಾಡಿಕೊಳ್ಳಲಾಗಿತ್ತು. ಸಚಿವರು ವಾಸ್ತವ್ಯ ಮಾಡಲು ವಿಐಪಿ ವಾರ್ಡ್ ಸಿದ್ಧಗೊಳಿಸಲಾಗುತ್ತಿದೆ ಎಂಬ ಅನುಮಾನಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜಪ್ಪ ಸ್ಪಷ್ಟನೆ ನೀಡಿದ್ದು, ವಿಐಪಿ ವಾರ್ಡ್‌ನ ಎಸಿ ಹಾಳಾಗಿತ್ತು. ಹಾಗಾಗಿ ಮತ್ತೂಂದನ್ನು ಅಳವಡಿಸುವ ಕೆಲಸ ನಡೆದಿದೆಯೇ ವಿನಃ ಸಚಿವರು ವಾಸ್ತವ್ಯ ಮಾಡುತ್ತಾರೆಂದು ಅಲ್ಲ. ಜನರಲ್ ವಾರ್ಡ್ ಹಾಗೂ ಐಸಿಯುನಲ್ಲಿ ವಾಸ್ತವ್ಯ ಮಾಡಲು ಕೂಡ ತಯಾರಿ ಮಾಡಿಕೊಂಡಿದ್ದೆವು ಎಂದು ತಿಳಿಸಿದರು .