ಚಿತ್ರದುರ್ಗ: ಡೆಂಘೀ ಜ್ವರ ಅಪಾಯಕಾರಿಯಾಗಿದ್ದು, ಡೆಂಘೀ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕಾರ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮನವಿ ಮಾಡಿದರು.
ಇಲ್ಲಿನ ರಂಗಯ್ಯನಬಾಗಿಲು ಗಣಪತಿ ದೇವಸ್ಥಾನದ ಸಮೀಪ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಹಯೋಗದೊಂದಿಗೆ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಡೆಂಘೀ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ನೀರಿನ ತೊಟ್ಟಿಗಳನ್ನು ತೆರೆದಿಬೇಡಿ, ಮುಚ್ಚಳ ಮುಚ್ಚಿ ಸಂಗ್ರಹಿಸಿ. ಸುತ್ತಮುತ್ತ ಪರಿಸರ ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಡೆಂಘೀ ಜ್ವರ ಬಾರದಂತೆ ಸಾರ್ವಜನಿಕರು ಮುಂಜಾಗ್ರತಾ ಹಾಗೂ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಡೆಂಘೀ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆ. ಈಡೀಸ್ ಈಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆ ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ. ಮೂರಕ್ಕಿಂತ ಹೆಚ್ಚು ದಿನಗಳಿಂದ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡರೆ ತಕ್ಷಣ ಆಶಾ, ಆರೋಗ್ಯ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಎಲ್. ಫಾಲಾಕ್ಷ ಮಾತನಾಡಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಡೆಂಘೀ ಪ್ರಕರಣಗಳು ಕಡಿಮೆಯಾಗಿದೆ. ಚಿತ್ರದುರ್ಗ ನಗರ ಪ್ರದೇಶದಲ್ಲಿ ಕೆಲವು ಪ್ರಕರಣಗಳು ಕಂಡು ಬಂದಿದ್ದು, ಚಿಕಿತ್ಸೆ ಮತ್ತು ನಿಯಂತ್ರಣ ಪ್ರಕ್ರಿಯೆಯನ್ನು ಚುರುಕಾಗಿದೆ ಮಾಡಲಾಗಿದೆ. ಡೆಂಘೀ ನಿಯಂತ್ರಣಕ್ಕೆ ಸಾರ್ವಜನಿಕರು ನಮ್ಮ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಕೋರಿದರು.
ಕೀಟಜನ್ಯ ನಿಯಂತ್ರಣಾಧಿಕಾರಿ ಡಾ| ಜಯಮ್ಮ ಮಾತನಾಡಿ, ಸೊಳ್ಳೆ ಪರದೆ ಉಪಯೋಗಿಸಿ ವಾರದಲ್ಲಿ ಒಂದು ದಿನ ಡ್ರೈ ಡೇ ಆಚರಿಸಿ. ಸೊಳ್ಳೆಗಳ ಉತ್ಪತ್ತಿ ಮೂಲವನ್ನು ನಾಶ ಮಾಡಬೇಕು ಎಂದು ತಿಳಿಸಿದರು. ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅರೆ ವೈದ್ಯಕೀಯ ಸಿಬ್ಬಂದಿಗಳು ‘ಕೀಟ ಚಿಕ್ಕದು ಕಾಟ ದೊಡ್ಡದು’ ಎಂದು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ, ಕೀಟಶಾಸ್ತ್ರಜ್ಞ ಡಾ|ನಂದಿನಿ ಕಡಿ, ಖಾಸಿಂ ಸಾಬ್, ಅಬು ಸ್ವಾಲೇಹ, ಹನುಮಂತಪ್ಪ, ಗಂಗಾಧರ, ನಾಗರಾಜ, ರಂಗಾರೆಡ್ಡಿ ಇದ್ದರು.
ನಗರ ಪ್ರದೇಶದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚು ಕಂಡು ಬಂದಿದ್ದು, ನಗರ ಪ್ರದೇಶದ ನಾಗರಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅವಶ್ಯಕತೆ ಇದೆ. ವಾರಕೊಮ್ಮೆಯಾದರೂ ನೀರು ಸಂಗ್ರಹಿಸುವ ಪರಿಕರಗಳನ್ನು ಸ್ವಚ್ಛವಾಗಿ ತೊಳೆದು ನೀರು ಸಂಗ್ರಹಿಸಿ ಮುಚ್ಚಳ ಮುಚ್ಚಬೇಕು. ಶುದ್ಧ ನೀರಿನಲ್ಲಿ ಸೊಳ್ಳೆಗಳು ಸಂತತಿ ಮಾಡುವುದರಿಂದ ತೆರೆದ ಪರಿಕರಗಳಲ್ಲಿ ನೀರು ಸಂಗ್ರಹಿಸಬಾರದು.
•
ಸಿ. ಸತ್ಯಭಾಮ, ಜಿಪಂ ಸಿಇಒ.