ಚಿತ್ರದುರ್ಗ: ಡೆಂಘೀ, ಚಿಕೂನ್ ಗುನ್ಯಾ ಮತ್ತಿತರ ಜ್ವರಗಳಿಂದ ದೂರ ಉಳಿಯಬೇಕಾದರೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಡ್ಡಾಯವಾಗಿ ಸೊಳ್ಳೆ ಪರದೆ ಬಳಕೆ ಮಾಡಿ ನಾನಾ ರೀತಿಯ ರೋಗಗಳಿಂದ ಮುಕ್ತವಾಗಿರಬೇಕು ಎಂದು ಜಿಲ್ಲಾ ಆ.ಕು.ಕ.ಅಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕು.ಕ.ಇಲಾಖೆ ಕೀಟಜನ್ಯ ರೋಗಗಳ ನಿಯಂತ್ರಣಾ ವಿಭಾಗದಿಂದ ಡೆಂಘೀ ಜಾಗೃತಿ ಜಾಥಾ ಮತ್ತು ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸೊಳ್ಳೆಗಳ ಚಿಕ್ಕದು ಎನ್ನುವ ಭಾವನೆ ಬೇಡ. ಕೀಟ ಚಿಕ್ಕದು ಕಾಟ ದೊಡ್ಡದು, ಸೊಳ್ಳೆಗಳು ನಮ್ಮನ್ನಾಳುವ ಮುನ್ನ ಜಾಗೃತರಾಗಬೇಕು. ಮನೆ ಮನೆಗಳಲ್ಲಿ ಲಾರ್ವಾ ಸಾಂದ್ರತೆ ಹೆಚ್ಚಾಗುತ್ತಿದೆ. ತಾವುಗಳು ಇವುಗಳ ಸಂತತಿಯನ್ನು ನಾಶ ಮಾಡಲು ಇಲಾಖೆಯೊಂದಿಗೆ ಸಹಕರಿಸಬೇಕು. ಲಾರ್ವಾ ಬೆಳೆಯುವ ಮೂಲ ಪರಿಕರಗಳಾದ ಟೈರು ತೆಂಗಿನ ಚಿಪ್ಪು ತುಂಡಾದ ಮಡಿಕೆ ಚೂರು, ಹಂಚು ಪ್ರದರ್ಶಿಸಿ ಈ ಫನತ್ಯಾಜ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಿ ಪರಿಸರ ನೈರ್ಮಲ್ಯ ಕಾಪಾಡಿ ಎಂದರು.
ಜಿಲ್ಲಾ ಕೀಟ ಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ.ಜಯಮ್ಮ ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ 74 ಡೆಂಘೀ ಪ್ರಕರಣಗಳು, 43 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಹೆಚ್ಚು ಪ್ರಕರಣಗಳು ಚಿತ್ರದುರ್ಗ ತಾಲೂಕಿನಲ್ಲಿ ಕಂಡು ಬಂದಿವೆ. ಅದರಲ್ಲೂ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಸಾರ್ವಜನಿಕರು ತಮ್ಮ ಮನೆಯ ನೀರಿನ ಸಂಗ್ರಹ ಪರಿಕರಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛ ಮಾಡಿಕೊಳ್ಳಬೇಕು. ನೀರಿನಲ್ಲಿರುವ ಹುಳಗಳು ಸೊಳ್ಳೆಯ ಮರಿಗಳು, ಮನೆ ಮನೆಗಳಲ್ಲಿ ಲಾರ್ವಾ ಸಾಂದ್ರತೆ ಕಡಿಮೆಯಾದರೆ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸಿ ಜ್ವರ ಬಂದ ಕೂಡಲೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ. ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದರು. ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ಸಿ.ಓ.ಸುಧಾ, ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್.ಬಿ.ವಿ., ಕೀಟ ಶಾಸ್ತ್ರಜ್ಞರಾದ ನಂದಿನಿಕಡಿ, ಸಿದ್ದಪ್ಪಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಹಿರಿಯ, ಕಿರಿಯ ಆರೋಗ್ಯ ಸಹಾಯಕರು ಖಾಸೀಂಸಾಬ್, ಮೂಗಪ್ಪ, ಹನುಮಂತಪ್ಪ, ಅಬುಸ್ವಾಲೇಹ, ಶಾಲಾ ಶಿಕ್ಷಕರು ಭಾಗವಹಿಸಿದ್ದರು. ಸ್ತಬ್ಧಚಿತ್ರ ಮತ್ತು ಜಾಥಾ ನಗರ ಪ್ರದಕ್ಷಿಣೆ ಮಾಡುತ್ತಾ ಸಂಪಿಗೆ ಸಿದ್ದೇಶ್ವರ ಶಾಲೆಯಿಂದ ಪ್ರಾರಂಭಿಸಿ, ಸಂಗೊಳ್ಳಿ ರಾಯಣ್ಣ ವೃತ್ತ, ಬುರುಜನಹಟ್ಟಿ, ಸಿಹಿ ನೀರು ಹೊಂಡದ ರಸ್ತೆ, ಕುಂಬಾರ ಬೀದಿ ಮುಖಾಂತರ ಹೊಳಲ್ಕೆರೆ ರಸ್ತೆ ಸಂಪಿಗೆ ಸಿದ್ದೇಶ್ವರ ಶಾಲೆಗೆ ಪುನಃ ಮರಳಿತು ಶಾಲಾ ವಿದ್ಯಾರ್ಥಿಗಳು ಸೊಳ್ಳೆಗಳ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ, ಕೀಟ ಚಿಕ್ಕದು ಕಾಟ ದೊಡ್ಡದು ಎಂದು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.