Advertisement

ಮೂಡಲಿ ಹಸಿರು ಪಟಾಕಿ ಜಾಗೃತಿ

12:52 PM Oct 27, 2019 | Naveen |

ಚಿತ್ರದುರ್ಗ: ಬೆಳಕಿನ ಹಬ್ಬ ದೀಪಾವಳಿಗಾಗಿ ಜನತೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ದೂರ ದೂರದ ನಗರ ಪ್ರದೇಶಗಳಲ್ಲಿರುವವರು ತಮ್ಮ ಊರುಗಳಿಗೆ ಮರಳುತ್ತಿದ್ದು, ಹಳ್ಳಿಗಳಲ್ಲಿ ಹಬ್ಬ ಕಳೆಗಟ್ಟುತ್ತಿದೆ. ನಗರದಲ್ಲಿ ಈಗಾಗಲೇ ಹಣತೆ, ಬಣ್ಣ ಬಣ್ಣದ ಅಲಂಕಾರಿಕ ದೀಪಗಳು, ಪಟಾಕಿಗಳ ಮಾರಾಟ ಜೋರಾಗಿದೆ.

Advertisement

ದೀಪಾವಳಿ ಎಷ್ಟು ಆಕರ್ಷಕ, ಸಂದರವಾದ ಹಬ್ಬವೋ ಅಷ್ಟೇ ಅಪಾಯಕಾರಿಯೂ ಹೌದು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಅಧಿ ಕಾರಿಗಳು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು. ಚಿತ್ರ-ವಿಚಿತ್ರವಾದ ಅಪಾಯಕಾರಿ ಪಟಾಕಿಗಳ ಬಗ್ಗೆ ಜಾಗೃತಿ ಮೂಡಿಸಿ ಪಟಾಕಿ ಹಾಗೂ ಮಾಲಿನ್ಯ ದೀಪಾವಳಿ ಆಚರಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಖಾಸಗಿ ಶಾಲೆಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಾಥಾ, ಕರಪತ್ರ ಹಂಚುವುದು, ಶಾಲೆಗಳಲ್ಲಿ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಹಸಿರು ಪಟಾಕಿ ಜಾಗೃತಿ ಕಡಿಮೆ: ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಸ್ನೇಹಿಯಾದ ಹಸಿರು ಪಟಾಕಿ ಸಿಡಿಸಬೇಕು, ಇದರಿಂದ ಶಬ್ದ ಹಾಗೂ ಮಾಲಿನ್ಯ ಎರಡೂ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದೆ. ಆದರೆ ಜಿಲ್ಲೆಯಲ್ಲಿ ಹಸಿರು ಪಟಾಕಿ ಬಳಕೆ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವಷ್ಟು ಜಾಗೃತಿ ಮೂಡಿಲ್ಲ. ಹಸಿರು ಪಟಾಕಿ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ.
ವರ್ತಕರು ಕೂಡ ಹಸಿರು ಪಟಾಕಿ ಅಂದರೇನು ಎಂದು ಗೊಂದಲದಲ್ಲಿದ್ದಾರೆ. ವಿಚಿತ್ರ ಅಂದರೆ ಚಿತ್ರದುರ್ಗದ ಪರಿಸರ ಅಧಿಕಾರಿ ಮುರಳಿ ಹೇಳುವಂತೆ ಹಸಿರು ಪಟಾಕಿಗಳು ಎಲ್ಲಿಯೂ ಸಿಗುತ್ತಿಲ್ಲ. ಮಾರಾಟಗಾರರ ಬಳಿಯೂ ಈ ಪಟಾಕಿಗಳಿಲ್ಲ. ಮಂಡಳಿಯವರು ಹಸಿರು ಪಟಾಕಿ ಜತೆಗೆ ಹಬ್ಬ ಆಚರಿಸಲು ಹೇಳಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ನಾನು ಕೂಡ ನೋಡಿಲ್ಲ ಎಂದರು.

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶವಿದ್ದು, ಜಿಲ್ಲಾಕಾರಿ ಕಚೇರಿ ಹಾಗೂ ನಗರಸಭೆಯಿಂದ ಅನುಮತಿ ಪಡೆದು ಪಟಾಕಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ. 120 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಬರುವ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಈಗಾಗಲೇ ಅನುಮತಿ ಪಡೆದಿರುವ ವರ್ತಕರಿಗೆ ಸೂಚಿಸಿದ್ದು, ನಗರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇದನ್ನು ಗಮನಿಸುವ ವ್ಯವಸ್ಥೆ ಮಾಡಲಾಗಿದೆ.

ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ಇಲ್ಲ: ಜಿಲ್ಲಾಸ್ಪತ್ರೆ ಸೇರಿದಂತೆ ಆರು ತಾಲೂಕುಗಳ ತಾಲೂಕು ಆಸ್ಪತ್ರೆಗಳಲ್ಲಿ ಪಟಾಕಿ ದುರಂತ ಅಥವಾ ಪಟಾಕಿ ಸಿಡಿದವರು ಬಂದರೆ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆಯೇನೂ ಇಲ್ಲ. ಮಂಗಳವಾರ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ನೇತ್ರ ತಪಾಸಣಾ ವಾರ್ಡ್‌ನಲ್ಲಿ ನಾಲ್ಕು ಬೆಡ್‌ಗಳನ್ನು ಇದಕ್ಕಾಗಿ ವ್ಯವಸ್ಥೆ ಮಾಡುತ್ತೇವೆ. ಇಬ್ಬರು ನೇತ್ರ ತಜ್ಞರು ಲಭ್ಯರಿರುತ್ತಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜಪ್ಪ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next