ಚಿತ್ರದುರ್ಗ: ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವ ಜತೆಗೆ ನೈತಿಕ ಮೌಲ್ಯಗಳನ್ನೂ ಸಂಪಾದಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್. ನಾಗರಾಜಪ್ಪ ಹೇಳಿದರು.
ನಗರದ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಯುವ ತರಂಗ-2019 ಸಾಂಸ್ಕೃತಿಕ ಮಹಾ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಂದೆ ತಾಯಿಗಳಿಗೆ ಮಕ್ಕಳೇ ದೊಡ್ಡ ಆಸ್ತಿ. ಅವರಿಗಾಗಿ ಆಸ್ತಿ ಮಾಡುವ ಬದಲು ಅವರಿಗೆ ಉತ್ತಮ ಶಿಕ್ಷಣ ಹಾಗೂ ಮೌಲ್ಯಗಳನ್ನು ಕಲಿಸಿಕೊಟ್ಟರೆ ಅವರು ಅತ್ಯುತ್ತಮವಾಗಿ ಬದುಕುತ್ತಾರೆ ಎಂದರು. ಈ ಸಾಂಸ್ಕೃತಿಕ ಹಬ್ಬದ ಜೊತೆಗೆ ಪರೀಕ್ಷಾ ತಯಾರಿ ಬಗ್ಗೆ ಗಮನ ನೀಡಬೇಕು. ಆದರೆ ಪರೀಕ್ಷೆ ಎನ್ನುವ ಭಯ ಬೇಡ. ನಿರಂತರವಾಗಿ ಅಧ್ಯಯನ ಮಾಡುತ್ತಾ, ಸರಿಯಾಗಿ ಪಾಠ ಆಲಿಸಿದರೆ ಪರೀಕ್ಷೆಗಳ ಬಗ್ಗೆ ಆತಂಕಪಡುವ ಪ್ರಮೇಏಯವೇ ಬರುವುದಿಲ್ಲ ಎಂದು ತಿಳಿಸಿದರು.
ಒಂದೊಂದು ದೇವಸ್ಥಾನದಲ್ಲಿ ಒಂದೊಂದು ದೇವರಿರುತ್ತವೆ. ಆದರೆ ಎಸ್‌ಆರ್‌ಎಸ್ ಎಂಬ ದೇಗುಲದಲ್ಲಿ ಸಾವಿರಾರು ಉದ್ಭವ ಮೂರ್ತಿಗಳಿದ್ದಾರೆ. ಅಂತಹ ದೇವಸ್ಥಾನವನ್ನು ಕಟ್ಟಿದ ಬಿ.ಎ. ಲಿಂಗಾರೆಡ್ಡಿ ಅವರ ಸಾಧನೆ ಅಮೋಘವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸದುರ್ಗದ ಜನರಲ್ ಕಾರ್ಯಪ್ಪ ಶಾಲೆಯ ಮುಖ್ಯಶಿಕ್ಷಕ ಜಿ. ಲೋಕೇಶ್ ಮಾತನಾಡಿ, ಎಸ್‌ಆರ್‌ಎಸ್ ಪಿಯು ಕಾಲೇಜು ರಾಜ್ಯದಲ್ಲೆ ಅತ್ಯುತ್ತಮ ಹೆಸರು ಗಳಿಸಿದೆ. ನೀಟ್, ಜೆಇಇ, ಸಿಇಟಿ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಸಂಸ್ಥೆ ಹೆಸರು ಪಡೆದಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಬಿ.ಎಲ್. ಅಮೋಘ… ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಚಾರ್ಯ ಈ. ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ಡಾ|
ಟಿ.ಎಸ್. ರವಿ ಹಾಗೂ ಎಲ್ಲ ವಿಭಾಗಗಳ ಪ್ರಾಚಾರ್ಯರು, ಅಧ್ಯಾಪಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.