ಚಿತ್ರದುರ್ಗ: ಕೋವಿಡ್ ಸೋಂಕು ತಗುಲಿದ್ದ 14 ಮಂದಿ ಗುರುವಾರ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಲ್ಲಿ ಜಿಲ್ಲಾಸ್ಪತ್ರೆ ಪಕ್ಕದ ಕೋವಿಡ್ ಆಸ್ಪತ್ರೆಯಿಂದ ಇಬ್ಬರು ಹಾಗೂ ಚಳ್ಳಕೆರೆ ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದ 11 ಹಾಗೂ ಹಿರಿಯೂರು ತಾಲೂಕು ದೇವರಕೊಟ್ಟ ಹಾಸ್ಟೆಲ್‌ನಲ್ಲಿದ್ದ ಐಎಎಸ್ ತರಬೇತಿಗೆ ತೆರಳಿದ್ದ ವ್ಯಕ್ತಿ ಸೇರಿದ್ದಾರೆ.
ಕೋವಿಡ್-19 ಸೋಂಕು ದೃಢಪಟ್ಟಿದ್ದ ಉತ್ತರ ಪ್ರದೇಶದ ಗೋರಕ್‌ಪುರ ಜಿಲ್ಲೆಯ 25 ವರ್ಷದ ವ್ಯಕ್ತಿ ಪಿ-1630 ಹಾಗೂ ಚಿತ್ರದುರ್ಗದ ಮಹಿಳೆ ಪಿ-2895 ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು. ಇನ್ನೂ ತಮಿಳುನಾಡಿನಿಂದ ಚೆನ್ನೈನಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ 58 ಕಾರ್ಮಿಕರ ಪೈಕಿ 26 ಜನರಿಗೆ ಕೋವಿಡ್ ಸೋಂಕು ತಗುಲಿತ್ತು. ಎಲ್ಲರನ್ನೂ ಚಳ್ಳಕೆರೆ ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಇವರಲ್ಲಿ 12 ಮಂದಿ ಹಾಗೂ ಅವರ ಪ್ರಾಥಮಿಕ ಸಂಪರ್ಕಿತರು ಸೇರಿದಂತೆ ಒಟ್ಟು 35 ಜನರನ್ನು ಬಿಡುಗಡೆ ಮಾಡಿದ್ದು, ಶುಕ್ರವಾರ ಬೆಳಗ್ಗೆ ಬೆಂಗಳೂರು ತಲುಪಿ ಅಲ್ಲಿಂದ ರೈಲಿನ ಮೂಲಿಕ ಉತ್ತರ ಪ್ರದೇಶ ಸೇರಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಡಿಎಚ್‌ಒ ಡಾ| ಪಾಲಾಕ್ಷ ಮಾತನಾಡಿ, ಉತ್ತರ ಪ್ರದೇಶ ಮೂಲದ 58 ಕಾರ್ಮಿಕರು ಚೆನ್ನೈನಿಂದ ತಮ್ಮ ಸ್ವಂತ ಊರಿಗೆ ತೆರಳಲು ಸರಕು ಸಾಗಾಣಿಕೆ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯ ಪರಶುರಾಮಪುರ ಬಳಿ ಚೆಕ್‌ಪೋಸ್ಟ್‌ನಲ್ಲಿ ತಡೆದು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಈ ಕಾರ್ಮಿಕರ ಪೈಕಿ ಒಬ್ಬರಿಗೆ ಸೋಂಕು ಇರುವುದು ಮೇ 22 ರಂದು ದೃಢಪಟ್ಟಿತ್ತು. ಹೀಗಾಗಿ ಈತನಿಗೆ ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಈ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಚಿತ್ರದುರ್ಗ ನಗರದ ಮಹಿಳೆ ಪಿ-2895 ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು, ಇವರಿಗೆ ಬೆಂಗಳೂರಿನಲ್ಲಿಯೇ ಮೇ 25 ರಂದು ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಮಹಿಳೆ ಚಿತ್ರದುರ್ಗಕ್ಕೆ ಬಂದ ಬಳಿಕ ಮೇ 30ರಂದು ಇವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಯಾವುದೇ ರೋಗಲಕ್ಷಣ ಇರಲಿಲ್ಲ. ಬಳಿಕ ಮತ್ತೆರಡು ಬಾರಿ ಮಹಿಳೆಯ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಎರಡು ಬಾರಿಯೂ ನೆಗೆಟಿವ್ ವರದಿ ಬಂದಿದೆ. ಈ ಮಹಿಳೆಯ ಪ್ರಾಥಮಿಕ ಸಂಪರ್ಕಿತರೆಲ್ಲರ ವರದಿಯೂ ನೆಗೆಟೀವ್ ಬಂದಿದೆ. ಹೀಗಾಗಿ ಇವರನ್ನು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ 7 ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರಲು ತಾಕೀತು ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 39 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದವು. ಚಿಕಿತ್ಸೆ ಪಡೆದು ಗುಣಮುಖರಾದ ಒಟ್ಟು 23 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನೂ 16 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರಿಗೆ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ವೈದ್ಯಕೀಯ ನೆರವು ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ತುಳಸಿ ರಂಗನಾಥ್ ಮಾತನಾಡಿ, ಉತ್ತರ ಪ್ರದೇಶ ಮೂಲದ 59 ಕಾರ್ಮಿಕರ ಪೈಕಿ ಒಟ್ಟು 27 ಜನರಿಗೆ ಸೋಂಕು ದೃಢಪಟ್ಟಿತ್ತು. ಈ ಪೈಕಿ ಒಬ್ಬರು ಸಂಪೂರ್ಣ ಗುಣಮುಖರಾಗಿದ್ದಾರೆ. ಇವರಲ್ಲಿ 15 ಜನರಿಗೆ ವರದಿ ನೆಗೆಟೀವ್ ಬಂದಿದ್ದು, ಇನ್ನೂ 11 ಜನರಿಗೆ ಸೋಂಕು ಇನ್ನೂ ಇದೆ. ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಿ ನೆಗೆಟೀವ್ ವರದಿ ಬಂದವರು ಹಾಗೂ ಗುಣಮುಖರಾದವರಿಗೆ ತಮ್ಮ ಸ್ವಗ್ರಾಮಕ್ಕೆ ಕಳುಹಿಸಿಕೊಡಲು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದ 11 ಜನರು ಗುಣಮುಖರಾದ ಬಳಿಕವೇ ಅವರನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡುವ ಏರ್ಪಾಟು ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜಪ್ಪ ಸೇರಿದಂತೆ ತಜ್ಞ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.