Advertisement

ಬೆಸ್ಕಾಂ ಕಾರ್ಯವೈಖರಿಗೆ ರೈತರು ಕಿಡಿ

03:20 PM Oct 20, 2019 | Team Udayavani |

ಚಿತ್ರದುರ್ಗ: ಹಗಲು ಹೊತ್ತಿನಲ್ಲಿ ನಾಲ್ಕು ತಾಸು, ರಾತ್ರಿ ವೇಳೆ ಮೂರು ತಾಸು ವಿದ್ಯುತ್‌ ನೀಡಲು ಸರ್ಕಾರ ಸೂಚಿಸಿದ್ದರೂ ಬೆಸ್ಕಾಂ ಸಿಬ್ಬಂದಿ ಮಾತ್ರ ಐದು ತಾಸಿಗಿಂತ ಕಡಿಮೆ ಅವಧಿಗೆ ವಿದ್ಯುತ್‌ ನೀಡುತ್ತಿದ್ದಾರೆ ಎಂದು ಬೆಸ್ಕಾಂ ಗ್ರಾಹಕರ ಸಂವಾದ ಸಭೆಯಲ್ಲಿ ರೈತರು ಆರೋಪಿಸಿದರು.

Advertisement

ಶನಿವಾರ ಬೆಸ್ಕಾಂ ಗ್ರಾಮಾಂತರ ಉಪವಿಭಾಗದ ಕಚೇರಿಯಲ್ಲಿ ನಡೆದ ರೈತರು ಹಾಗೂ ಗ್ರಾಹಕರ ಸಂವಾದ ಸಭೆಯಲ್ಲಿ ಬೆಸ್ಕಾಂ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತವಾಯಿತು.

ನೀರಿದ್ದರೂ ವಿದ್ಯುತ್‌ ಸಂಪರ್ಕ ಇಲ್ಲದ ಕಾರಣದಿಂದ ಟ್ಯಾಂಕರ್‌ ನೀರಿನಿಂದ ಅಡಿಕೆ ತೋಟ ಉಳಿಸಿಕೊಳ್ಳುವ ಕಸರತ್ತು ಮಾಡಿದ್ದೇವೆ. ಬೆಸ್ಕಾಂನಿಂದಲೇ ನಮ್ಮ ಅಡಿಕೆ ತೋಟ ಒಣಗಿದಂತಾಗಿದೆ ಎಂದು ಎನ್‌. ಬಳ್ಳೆಕಟ್ಟೆ ಗ್ರಾಮದ ರೈತ ಅಜ್ಜಪ್ಪ ದೂರಿದರು.

ಆ ಭಾಗದ ಸೆಕ್ಷನ್‌ ಆಫೀಸರ್‌ಗೆ ದೂರವಾಣಿ ಕರೆ ಮಾಡಿದ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಜೆ. ರಮೇಶ್‌, ಅಲ್ಲೇನು ಸಮಸ್ಯೆ ಎಂದು ವಿಚಾರಿಸಿದರು. ಸ್ವಲ್ಪ ಹೊತ್ತಿನ ನಂತರ ಸಭೆಗೆ ಆಗಮಿಸಿದ ಎನ್‌. ಬಳ್ಳೆಕಟ್ಟೆ ಭಾಗದ ಸಿಬ್ಬಂದಿ, ಮಳೆ ಗಾಳಿಯಿಂದ ಕಂಬ ಬಿದ್ದಿವೆ. ರಿಪೇರಿ ಮಾಡಿ ವಿದ್ಯುತ್‌ ನೀಡುತ್ತೇವೆ ಎಂದು ತಿಳಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತರು, ಮಳೆ ಈಗ ಬಂದಿರುವುದರಿಂದ ಕಂಬ ಬಿದ್ದಿವೆ. ಬೇರೆ ಸಂದರ್ಭದಲ್ಲೂ ಇದೇ ಸಮಸ್ಯೆ ಇರುತ್ತದೆ ಎಂದರು.

ತಾಲೂಕಿನ ಜಾನಕೊಂಡ ಗ್ರಾಮದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಕೊರೆಸಲಾಗಿರುವ ಕೊಳವೆಬಾವಿಗೆ ಐದಾರು ತಿಂಗಳಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ ಎಂದು ರೈತರು ಸಭೆಯ ಗಮನಕ್ಕೆ ತಂದರು.

Advertisement

ಇಂಜಿನಿಯರ್‌ ರಮೇಶ್‌, ಒಂದು ವಾರದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಬೀದಿ ದೀಪಗಳು ಹಗಲು ವೇಳೆಯೂ ಬೆಳೆಗುತ್ತಿರುವ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದ ವಿದ್ಯುತ್‌ ಪೋಲಾಗುತ್ತಿದ್ದು, ಕೂಡಲೇ ಇದನ್ನು ತಡೆಗಟ್ಟುವಂತೆ ಒತ್ತಾಯಿಸಿದರು. ಬೀದಿದೀಪ ನಿರ್ವಹಣೆಯ ಹೊಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ಒಪ್ಪಿಸಿ ಸರ್ಕಾರ 2014ರಲ್ಲಿ ಆದೇಶ ಹೊರಡಿಸಿದೆ. ದುರಸ್ತಿ ಹೊಣೆ ಮಾತ್ರ ಬೆಸ್ಕಾಂ ಮೇಲಿದೆ. ಹಗಲು ಹೊತ್ತಿನಲ್ಲೂ ವಿದ್ಯುತ್‌ ದೀಪಗಳು ಉರಿಯುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು ಗಮನಕ್ಕೆ ಬಂದಿದೆ.

ವಿದ್ಯುತ್‌ ಪೋಲು ಮಾಡದಂತೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡುವುದಾಗಿ ರಮೇಶ್‌ ತಿಳಿಸಿದರು. ಎರಡು ವರ್ಷಗಳಿಂದ ವಿದ್ಯುತ್‌
ಪರಿವರ್ತಕ ಒದಗಿಸಿಲ್ಲ ಎಂದು ಹುಣಸೆಕಟ್ಟೆ ಗ್ರಾಮಸ್ಥರು ಆರೋಪಿಸಿದರು.ವಿದ್ಯುತ್‌ ದರ ಏರಿಕೆಯ ಬಗ್ಗೆಯೂ ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ರೈತರಾದ ಗುರುಸಿದ್ದಪ್ಪ, ತಿಪ್ಪೇಸ್ವಾಮಿ, ತಿಮ್ಮಣ್ಣ, ಗೋಪಿಕೃಷ್ಣ, ಅಜ್ಜಣ್ಣ, ರಾಜು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next