Advertisement

ಮೈತ್ರಿ ಪಕ್ಷಗಳಿಂದಲೇ ಬಿಜೆಪಿಗೆ ಹೆಚ್ಚು ಸ್ಥಾನ

11:37 AM Jul 14, 2019 | Naveen |

ಚಿತ್ರದುರ್ಗ: ಜನ ವಿರೋಧಿ ನರೇಂದ್ರ ಮೋದಿ ಮತ್ತೂಮ್ಮೆ ದೇಶದ ಪ್ರಧಾನಿಯಾಗಿರುವುದರಿಂದ ಸಂವಿಧಾನ ಬದಲಾವಣೆ ಕಾಲ ಸನ್ನಿಹಿತವಾಗಿದೆ. ಇದರಿಂದಾಗಿ ಮೀಸಲಾತಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಆತಂಕ ವ್ಯಕ್ತಪಡಿಸಿದರು.

Advertisement

ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ದಲ್ಲಾಲರ ಭವನದಲ್ಲಿ ಶನಿವಾರ ನಡೆದ ಭಾರತ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಮಿಕ ವಿರೋಧಿಯಾಗಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದಿದೆ. ಬಿಜೆಪಿಯವರು ಸದಾ ಮುಸ್ಲಿಂ ಸಮುದಾಯವನ್ನು ದ್ವೇಷಿಸುವುದು, ಸರ್ಜಿಕಲ್ ದಾಳಿಯಂತಹ ತಂತ್ರಗಾರಿಕೆ ಮಾಡಿ ದೇಶದ ಮುಗ್ಧ ಜನರನ್ನು ವಂಚಿಸಿ ಮತ ಪಡೆಯಲಾಯಿತು. ಬೇರೆ ಪಕ್ಷಗಳ ವೈಫಲ್ಯವನ್ನು ಜನತೆಗೆ ತಿಳಿಸಿದ ಬಿಜೆಪಿ ದೇಶದಲ್ಲಿ ಅಧಿಕಾರ ಹಿಡಿಯಿತು. ಬಿಜೆಪಿ ಎಷ್ಟು ಜನಪರವಾಗಿರುತ್ತದೆ ಎನ್ನುವುದು ಕೇಂದ್ರ ಬಜೆಟ್ನಿಂದಲೇ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಕೋಮುವಾದಿ ಬಿಜೆಪಿಯನ್ನು ಕಟ್ಟಿ ಹಾಕುವ ಶಕ್ತಿ ಇರುವುದು ಕಮ್ಯೂನಿಸ್ಟ್‌ ಪಕ್ಷಕ್ಕೆ ಮಾತ್ರ. ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರಿಂದಲೇ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಕೋಮುವಾದಿ ಪಕ್ಷ ಪಡೆದಿದೆ ಎಂದು ಆರೋಪಿಸಿದರು.

ಕಮ್ಯೂನಿಸ್ಟ್‌ ಪಕ್ಷ, ರೈತ ಸಂಘ ಹಾಗೂ ಬಿಎಸ್‌ಪಿಯನ್ನು ದೂರವಿಟ್ಟು ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಮಾತ್ರ ಮೈತ್ರಿ ಮಾಡಿಕೊಂಡ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ದಾರಿ ಸುಲಭವಾಯಿತು. ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷಗಳೊಡನೆ ಮಾತುಕತೆ ನಡೆಸಿ ತೀರ್ಮಾನ ಕೈಗೊಂಡಿದ್ದರೆ ಬಿಜೆಪಿಗೆ ಗೆಲುವು ಕಷ್ಟವಾಗುತ್ತಿತ್ತು. ಇದರಿಂದ ದೇವೇಗೌಡರದು ಕುಟುಂಬ ರಾಜಕಾರಣ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಾಯಿತು. ಹಾಗಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಮೊಮ್ಮಗ ನಿಖೀಲ್ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಟೀಕಿಸಿದರು.

Advertisement

ಸಿಪಿಐ ಪಕ್ಷದ ಕಾರ್ಡ್‌ ನಿಮ್ಮ ಬಳಿ ಇದ್ದರೆ ಹೆಮ್ಮೆ, ಗೌರವವಿರುತ್ತದೆ. ಬಡವರು, ಕಾರ್ಮಿಕರ ಪರ ಹೋರಾಡಬೇಕೆಂದರೆ ಕೈಯಲ್ಲಿ ಕೆಂಪು ಝಂಡಾ ಹಿಡಿಯಬೇಕು. ಭ್ರಷ್ಟರು ನಮ್ಮ ಕಾರ್ಡ್‌ ಮುಟ್ಟಲು ಆಗುವುದಿಲ್ಲ ಎಂಬುದನ್ನು ಸಿಪಿಐ ಜಿಲ್ಲಾ ಮಂಡಳಿ ಸದಸ್ಯರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಸಿಪಿಐ ಸಹ ಕಾರ್ಯದರ್ಶಿ ಡಾ. ಜನಾರ್ದನ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ಶಿವಣ್ಣ, ಕಾರ್ಯದರ್ಶಿ ಸಿ.ವೈ. ಶಿವರುದ್ರಪ್ಪ, ಸಹ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು, ತಾಲೂಕು ಕಾರ್ಯದರ್ಶಿ ಟಿ.ಆರ್‌. ಉಮಾಪತಿ, ಎಪಿಎಂಸಿ ಹಮಾಲರ ಸಂಘದ ಮುಖಂಡ ಬಿ. ಬಸವರಾಜ್‌, ದೊಡ್ಡಉಳ್ಳಾರ್ತಿ ಕರಿಯಣ್ಣ, ಪಾಲವ್ವನಹಳ್ಳಿ ಪ್ರಸನ್ನಕುಮಾರ್‌, ಹೊಳಲ್ಕೆರೆ ತಾಲೂಕು ಕಾರ್ಯದರ್ಶಿ ಮಹೇಶ್ವರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next