Advertisement

ಪರಿಶಿಷ್ಟ ಜಾತಿ ಮಹಿಳೆಗೆ ಅಧ್ಯಕ್ಷ್ಯ ಸ್ಥಾನ

03:30 PM Mar 13, 2020 | Naveen |

ಚಿತ್ರದುರ್ಗ: ಚುನಾವಣೆ ಮುಗಿದ ಒಂದೂವರೆ ವರ್ಷದ ಬಳಿಕ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿರುವುದು ಬಹುಶಃ ಇದೇ ಮೊದಲು. ಅದೇ ರೀತಿ ಚಿತ್ರದುರ್ಗ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ಸಿಕ್ಕಿರುವುದು ಕೂಡ ಹೊಸ ಇತಿಹಾಸ.

Advertisement

2018 ಸೆಪ್ಟಂಬರ್‌ ತಿಂಗಳಲ್ಲಿ ಚಿತ್ರದುರ್ಗ, ಚಳ್ಳಕೆರೆ ನಗರಸಭೆ ಹಾಗೂ ಹೊಸದುರ್ಗ ಪುರಸಭೆಗಳಿಗೆ, ನಂತರ 2019ರ ಮೇ ತಿಂಗಳಲ್ಲಿ ಹಿರಿಯೂರು ನಗರಸಭೆ ಹಾಗೂ ಹೊಳಲ್ಕೆರೆ, ಮೊಳಕಾಲ್ಮೂರು ಪಟ್ಟಣ ಪಂಚಾಯತ್‌ಗಳಿಗೆ ಚುನಾವಣೆ ನಡೆದಿತ್ತು. ಚುನಾವಣೆ ನಡೆದ ಕೆಲ ದಿನಗಳಲ್ಲೇ ಸರ್ಕಾರ ಪ್ರಕಟಿಸಿದ ಮೀಸಲಾತಿ ಪಟ್ಟಿಗೆ ರಾಜ್ಯದ ಕೆಲವೆಡೆ ಆಕ್ಷೇಪ ಬಂದು ಕೋರ್ಟ್‌ ಮೆಟ್ಟಿಲೇರಿದ ಪರಿಣಾಮ ಇಷ್ಟು ದೀರ್ಘಾವಧಿವರೆಗೆ ಸದಸ್ಯರು ಅಧಿಕೃತವಾಗಿ ನಗರಸಭೆ, ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿ ಕೆಲಸ ಮಾಡಲು ಕಾಯಬೇಕಾಯಿತು.

ಅಂತಿಮವಾಗಿ 2020, ಮಾ. 10 ರಂದು ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಈಗ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕುರಿತ ಬಿರುಸಿನ ಚರ್ಚೆಗಳು ನಡೆಯುತ್ತಿವೆ.

ಎಸ್ಸಿ ಮಹಿಳೆಗೆ ಮೊದಲ ಮೀಸಲಾತಿ: ಚಿತ್ರದುರ್ಗ ನಗರಸಭೆ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮಹಿಳೆಗೆ ನಗರಸಭೆ ಅಧ್ಯಕ್ಷರಾಗುವ ಮೀಸಲಾತಿ ಜಾರಿಯಾಗಿದೆ.

ಪರಿಶಿಷ್ಟ ವರ್ಗದ ಪುರುಷರು ನಗರಸಭೆ ಅಧ್ಯಕ್ಷರಾಗಿದ್ದಾರೆ. ಆದರೆ ಮಹಿಳೆಗೆ ಇದುವರೆಗೆ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಪ್ರಕಟವಾಗಿರುವ ಪಟ್ಟಿಯಲ್ಲಿ ಮೀಸಲು ನಿಗದಿಯಾಗಿರುವುದು, ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಅಧಿಕಾರದ ಹೊಸ್ತಿಲಲ್ಲಿರುವುದು ವಿಶೇಷ.

Advertisement

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ಒದಗಿಸಿದೆ.

ಯಾರಾಗಬಹುದು ಅಧ್ಯಕ್ಷೆ-ಉಪಾಧ್ಯಕ್ಷರು?: ಪರಿಶಿಷ್ಟ ಜಾತಿ ಮಹಿಳೆಗೆ ಅಧ್ಯಕ್ಷ ಸ್ಥಾನ ಹಾಗೂ ಹಿಂದುಳಿದ ವರ್ಗ “ಎ’ಗೆ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಅಭ್ಯರ್ಥಿಗಳ ತಲಾಶ್‌ ಆರಂಭವಾಗಿದೆ. ಸದ್ಯ ಚಿತ್ರದುರ್ಗ ನಗರಸಭೆಯ 35 ಸ್ಥಾನಗಳ ಪೈಕಿ ಬಿಜೆಪಿ 17, ಕಾಂಗ್ರೆಸ್‌ 5, ಜೆಡಿಎಸ್‌ 6 ಹಾಗೂ ಪಕ್ಷೇತರರು 7 ಜನ ಆಯ್ಕೆಯಾಗಿದ್ದಾರೆ. ಪಕ್ಷೇತರರಲ್ಲೂ ಬಿಜೆಪಿ ಬೆಂಬಲಿತರಿರುವುದರಿಂದ ಅಧಿಕಾರ ಹಿಡಿಯುವುದು ಬಿಜೆಪಿ ಎನ್ನುವುದು ಬಹುತೇಕ ಅಂತಿಮ.

ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಯಿಂದ ಆಯ್ಕೆಯಾಗಿರುವ ಮಹಿಳೆಯರು ಇಬ್ಬರಿದ್ದಾರೆ. 32ನೇ ವಾರ್ಡ್‌ ಸದಸ್ಯೆ ತಾರಕೇಶ್ವರಿ ಹಾಗೂ 13ನೇ ವಾರ್ಡ್‌ನ ಭಾಗ್ಯಮ್ಮ ಆನಂದ್‌ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ “ಎ’ ಗೆ ಮೀಸಲಾಗಿರುವುದರಿಂದ ಮಹಿಳೆ, ಪುರುಷ ಯಾರು ಬೇಕಾದರೂ ಆಯ್ಕೆಯಾಗಬಹುದು. ಬಿಜೆಪಿಯಲ್ಲಿ ಈ ಸ್ಥಾನಕ್ಕೆ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ.

8ನೇ ವಾರ್ಡ್‌ ಸದಸ್ಯ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಧರ್‌, 21ನೇ ವಾರ್ಡ್‌ ಸದಸ್ಯೆ ಅನುರಾಧ ರವಿಕುಮಾರ್‌, 22ನೇ ವಾರ್ಡ್‌ನ ರೋಹಿಣಿ ನವೀನ್‌, 20ನೇ ವಾರ್ಡ್‌ನ ಅನಿತಾ ರಮೇಶ್‌, 33ನೇ  ವಾರ್ಡ್‌ನ ಶ್ರೀದೇವಿ ಚಕ್ರವರ್ತಿ, 28ನೇ ವಾರ್ಡ್‌ನ ಶ್ವೇತಾ ವೀರೇಶ್‌, 6ನೇ ವಾರ್ಡ್‌ನ ಮಂಜುಳಾ ವೇದಾ ಸೇರಿದಂತೆ ಇನ್ನೂ ಹಲವರು ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಮೀಸಲಾತಿಗೆ ಅರ್ಹರಾಗಿದ್ದಾರೆ. ಹಾಗಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇದೆ. ಹಾಗಾಗಿ ಉಪಾಧ್ಯಕ್ಷರು ಯಾರಾಗಬಹುದು ಎಂಬುದು ಕುತೂಹಲ ಮೂಡಿಸಿದೆ.

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next