Advertisement

ಛಾಯಾಗ್ರಹಣಕ್ಕೆ ಕಲಾತ್ಮಕತೆ ಮುಖ್ಯ

06:42 PM Jan 20, 2020 | Naveen |

ಚಿತ್ರದುರ್ಗ: ಕಲಾತ್ಮಕತೆ, ಕಾಲ್ಪನಿಕತೆ ಇದ್ದಾಗ ಮಾತ್ರ ಉತ್ತಮ ಛಾಯಾಗ್ರಾಹಕನಾಗಿ ಹೊರಹೊಮ್ಮಲು ಸಾಧ್ಯ ಎಂದು ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಎಸ್‌. ತಿಪ್ಪೇಸ್ವಾಮಿ ಹೇಳಿದರು.

Advertisement

ಚಿತ್ರದುರ್ಗ ತಾಲೂಕು ಫೋಟೋ ಮತ್ತು ವೀಡಿಯೋಗ್ರಾಫರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ ವತಿಯಿಂದ ಭಾನುವಾರ ನಗರದ ಬಂಜಾರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ “ಛಾಯಾ ಸಂಭ್ರಮ-2020′ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಕೆಲವೇ ಫೋಟೊ ಸ್ಟುಡಿಯೋಗಳಿದ್ದವು. ಆಗ ಈಗಿರುವಂತೆ
ಪ್ರಯೋಗಾಲಯಗಳಿರಲಿಲ್ಲ. ಒಂದು ಪಾಸ್‌ ಪೋರ್ಟ್‌ ಫೋಟೋಗಾಗಿ ವಾರಗಟ್ಟಲೇ ಕಾಯಬೇಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಎಲ್ಲವೂ ಐದು ನಿಮಿಷದಲ್ಲಿ ಸಿಗುವ ಕಾಲಘಟ್ಟದಲ್ಲಿದ್ದೇವೆ. ಆಧುನಿಕ ತಂತ್ರಜ್ಞಾನ ಬಂದು ಮೊಬೈಲ್‌ಗ‌ಳಲ್ಲೇ ವಿಡಿಯೋ, ಫೋಟೋ ತೆಗೆಯಲಾಗುತ್ತಿದೆ.

ಈ ಮೂಲಕ ಛಾಯಾಗ್ರಾಹಕರಿಗೆ ಹೆಚ್ಚಿನ ಕೆಲಸ ಇಲ್ಲದಂತೆ ಮಾಡಲಾಗಿದೆ. ಆದರೆ ಯಾವುದರಲ್ಲೇ ಫೋಟೋ ತೆಗೆದರೂ ಕಲಾತ್ಮಕತೆ ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಚಿತ್ರಗಳು ಹೊರಹೊಮ್ಮುತ್ತವೆ ಎಂದರು. ಆರಂಭದ ದಿನಗಳಲ್ಲಿ ಚಲನಚಿತ್ರಗಳಿಗೆ ಛಾಯಾಗ್ರಾಹಕರನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಆಗ ಚಿತ್ರದುರ್ಗದಲ್ಲಿ ಉತ್ತಮ ಛಾಯಾಗ್ರಾಹಕರು ದೊರೆಯುತ್ತಿದ್ದರು.

ಇಲ್ಲಿನ ಛಾಯಾಗ್ರಾಹಕರು ಹೆಚ್ಚು ಕಲಾತ್ಮಕತೆ ಮೈಗೂಡಿಸಿಕೊಳ್ಳುತ್ತಿದ್ದರು. ಇಂದಿಗೂ ಸಹ ಸಿನಿಮಾ ಕ್ಷೇತ್ರದಲ್ಲಿ ಚಿತ್ರದುರ್ಗ ಜಿಲ್ಲೆಯವರೇ ಹೆಚ್ಚು ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಸ್‌. ಪರಮೇಶ್‌ ಡಿಜಿ ಇಮೇಜ್‌ ಪ್ರದರ್ಶನವನ್ನು ಉದ್ಘಾಟಿಸಿದರು. ತಾಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ಮಹಂತೇಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘದ ಕಾರ್ಯದರ್ಶಿ ಎ.ಎಂ. ಮುರಳಿ, ಕೋಟೆ ಪ್ರವಾಸಿ ಮಾರ್ಗದರ್ಶಿ ಕೆ.ಎನ್‌. ತಿಪ್ಪೇಸ್ವಾಮಿ, ಅಂಚೆ ಇಲಾಖೆ ಸೂಪರಿಂಟೆಂಡೆಂಟ್‌ ಶಿವರಾಜ್‌ ಖೀಂಡೆಮಠ್ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next