Advertisement

ಕೋಟೆ ನಾಡಿಗೆ ನೀರೂ ಇಲ್ಲ-ರೈಲೂ ಇಲ್ಲ

11:57 AM Jul 06, 2019 | Naveen |

ಹರಿಯಬ್ಬೆ ಹೆಂಜಾರಪ್ಪ
ಚಿತ್ರದುರ್ಗ:
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಜನರ ಬಹುವರ್ಷಗಳ ಕನಸಾದ ನೇರ ರೈಲು ಮಾರ್ಗಕ್ಕೆ ವಿಶೇಷ ಕೊಡುಗೆ, ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಹಾಗೂ ಐತಿಹಾಸಿಕ ಕೋಟೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿವೆ.

Advertisement

ಜಿಲ್ಲೆಯಲ್ಲಿರುವ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ, ಮತ್ತು ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಸಂಸದರು ಗೆದ್ದ ಹೊಸದರಲ್ಲಿ ಕೋಟೆಗೆ ವಿಶ್ವ ಮಾನ್ಯತೆ ತಂದು ಕೊಡುವ ಕಾರ್ಯ ಮಾಡಲಾಗುತ್ತದೆ. ಮಾದರಿ ಜಿಲ್ಲೆ ಮಾಡಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತದೆ ಎನ್ನುವ ಹತ್ತಾರು ಭರವಸೆ ನೀಡಿದ್ದರು. ಆದರೆ ಈ ಬಜೆಟ್‌ನಲ್ಲಿ ಇದು ಸಾಧ್ಯವಾಗಿಲ್ಲ.

ರಾಷ್ಟ್ರದ 16 ಅತಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಚಿತ್ರದುರ್ಗ ಸ್ಥಾನ ಪಡೆದಿದ್ದು ರಾಜ್ಯದ ಏಕೈಕ ಜಿಲ್ಲೆಯಾಗಿದೆ. ಜಿಲ್ಲೆಗೆ 371 ವಿಶೇಷ ಸ್ಥಾನ ಮಾನದ ಸೌಲಭ್ಯ ನೀಡಿ ಶಿಕ್ಷಣ, ಉದ್ಯೋಗ, ಕೈಗಾರಿಕೆಗಳನ್ನು ತಂದು ಸಮಗ್ರ ಅಭಿವೃದ್ಧಿ ಮಾಡುವ ಜನಪ್ರತಿನಿಧಿಗಳ ಕನಸು ಈಡೇರಿಲ್ಲ. ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಮೆಡಿಕಲ್ ಕಾಲೇಜ್‌ ಆರಂಭಿಸಲು ಅನುದಾನ ಕೊಡಿಸುವ ಬಿಜೆಪಿ ಮುಖಂಡರ ಉದ್ದೇಶವೂ ಈಡೇರಿಲ್ಲ. ಒಟ್ಟಾರೆ ಮಧ್ಯ ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಹೇಳಿಕೊಳ್ಳುವಂತಹ ಯಾವುದೇ ಕೊಡುಗೆ ಸಿಕ್ಕಿಲ್ಲ.

ಹೀಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್ ಕುರಿತು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್‌ ಹೆಚ್ಚಳಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಾರ್ವಜನಿಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2ನೇ ಅವಧಿಗೆ 300ಕ್ಕೂ ಹೆಚ್ಚಿನ ಸೀಟು ಪಡೆದು 2ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದು, ಸಾಕಷ್ಟು ನಂಬಿಕೆ, ವಿಶ್ವಾಸ ಇಡಲಾಗಿದ್ದು ಆ ಎಲ್ಲ ನಿರೀಕ್ಷೆ ಹುಸಿಗೊಳಿಸಿದ್ದಾರೆ.

Advertisement

ರೈತರು, ಮಹಿಳೆಯರು, ಜನ ಸಾಮಾನ್ಯರ ನಿರೀಕ್ಷೆಗಳನ್ನು ಸಾಕಾರಗೊಳಿಸಿಲ್ಲ. ಈ ಬಾರಿ ಮಹಿಳೆಯೊಬ್ಬರು ಬಜೆಟ್ ಮಂಡಿಸುತ್ತಿದ್ದು, ಮಹಿಳೆಯರಿಗೆ ಭಾರೀ ನಿರೀಕ್ಷೆಯಿತ್ತು. ಆ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಆದ್ಯತೆ ನೀಡುವ ಸಾಧ್ಯತೆ ಕಾಣಿಸದಿರುವುದರಿಂದ ಜಿಲ್ಲೆಯ ಜನತೆಯಲ್ಲಿ ನಿರಾಸೆ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next