Advertisement

ಅಬ್ಟಾ! ಅಂತೂ ಅದಿರು ಲಾರಿ ಸಂಚಾರಕ್ಕೆ ಬ್ರೇಕ್‌

12:12 PM Jun 13, 2019 | Naveen |

ಚಿತ್ರದುರ್ಗ: ಗರ್ಭಿಣಿ ಸೇರಿ ಮೂವರ ಸಾವಿಗೆ ಕಾರಣವಾದ ಅದಿರು ಲಾರಿಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಆದೇಶ ಹೊರಡಿಸಿದ್ದಾರೆ.

Advertisement

ಚಿತ್ರದುರ್ಗ-ಮಾಳಪ್ಪನಹಟ್ಟಿ-ಭೀಮಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಅದಿರು ತುಂಬಿದ ಲಾರಿಗಳ ಸಂಚಾರವನ್ನು ನಿಷೇಧಿಸಲಾಗಿದೆ. ತಹಶೀಲ್ದಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ವರದಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರ ಒಪ್ಪಿಗೆ ಆಧರಿಸಿ ಜಿಲ್ಲಾಧಿಕಾರಿಗಳು ಜೂ. 11ರಂದು ಅದಿರು ಲಾರಿಗಳ ಸಂಚಾರವನ್ನು ನಿಷೇಧಿಸಿದ್ದಾರೆ.

ಚಿತ್ರದುರ್ಗ-ಮಾಳಪ್ಪನಹಟ್ಟಿ-ಭೀಮಸಮುದ್ರ ಮಾರ್ಗದಲ್ಲಿ ಸಂಚರಿಸುವ ಅದಿರು ತುಂಬಿದ ಲಾರಿಗಳ ಚಾಲನೆಯನ್ನು ಅನನುಭವಿಗಳು, ಯುವಕರು, ಪರವಾನಗಿ ಇಲ್ಲದವರು ಚಾಲನೆ ಮಾಡುತ್ತಿರುತ್ತಾರೆ. ಅದಿರು ತುಂಬಿದ ಭಾರೀ ವಾಹನಗಳು ಮೇಗಳಹಳ್ಳಿಯಿಂದ ಭೀಮಸಮುದ್ರ, ಬೊಮ್ಮೇನಹಳ್ಳಿ, ಹಳಿಯೂರು, ಹಿರೇಗುಂಟನೂರು, ಮಾನಂಗಿ, ಸಿದ್ದಾಪುರ, ಜಾಲೀಕಟ್ಟೆ ಗೇಟ್ ಮೂಲಕ ಮಾಳಪ್ಪನಹಟ್ಟಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಬರುತ್ತವೆ. ಅದಿರು ತುಂಬಿದ ಲಾರಿಗಳಿಂದ ಸಾಕಷ್ಟು ಅಪಘಾತ ಸಂಭವಿಸಿ ಸಾವು-ನೋವುಗಳಾಗಿದ್ದವು. ಈ ಮಾರ್ಗದ ಹಳ್ಳಿಗಳ ಜನರು ಪ್ರತಿಭಟನೆ ಮಾಡಿ ಲಾರಿಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಇದರಿಂದ ಕಾನೂನು ಸುವ್ಯವಸ್ಥೆ, ಶಾಂತಿ ಪಾಲನೆಗೆ ಧಕ್ಕೆ ಆಗುತ್ತಿರುವುದನ್ನು ಮನಗಂಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಜಿಲ್ಲಾಧಿಕಾರಿಗಳು ಅದಿರು ತುಂಬಿದ ಲಾರಿಗಳ ಸಂಚಾರವನ್ನು ನಿರ್ಬಂಧಿಸಿದ್ದಾರೆ.

ಹಿರೇಗುಂಟನೂರು ಬಸ್‌ ನಿಲ್ದಾಣ, ನಾರಾಯಣ ಮೈನ್ಸ್‌, ಭೀಮಸಮುದ್ರ- ಬೊಮ್ಮೇನಹಳ್ಳಿ, ಹಿರೇಗುಂಟನೂರು ಎ.ಕೆ. ಕಾಲೋನಿ, ಭೀಮಸಮದ್ರದ ಪೆಟ್ರೋಲ್ ಬಂಕ್‌ ಸಮೀಪ, ಸಿದ್ದಾಪುರ, ಹಿರೇಗುಂಟನೂರು ಮತ್ತಿತರ ವಿವಿಧ ಸ್ಥಳಗಳಲ್ಲಿ 14 ಅಪಘಾತಗಳನ್ನು ಅದಿರು ತುಂಬಿದ ಲಾರಿಗಳ ಚಾಲಕರು ಎಸಗಿದ್ದರು. ಈ ಎಲ್ಲ ಕಾರಣಗಳಿಂದ ಜಿಲ್ಲಾಧಿಕಾರಿಗಳು ಅದಿರು ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

2010ರಿಂದ ಇದುವರೆಗೆ ಒಟ್ಟು 14 ಅಪಘಾತ
2010ರಿಂದ ಇಲ್ಲಿಯ ತನಕ ಇದೇ ಮಾರ್ಗದಲ್ಲಿ ಅದಿರು ತುಂಬಿದ ಲಾರಿಗಳಿಂದ ಒಟ್ಟು 14 ಅಪಘಾತಗಳು ಸಂಭವಿಸಿದ್ದವು. ಜೂನ್‌ 10 ರಂದು ಅದಿರು ತುಂಬಿದ ಲಾರಿಯನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆಸಿದ ಪರಿಣಾಮ ಗರ್ಭಿಣಿ ದೀಪಾಬಾಯಿ, ಪತಿ ಮಹಂತೇಶ್‌ ನಾಯ್ಕ, ಸಂಬಂಧಿ ಚೇತನ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ಅಲ್ಲದೆ 2010ರಲ್ಲಿ ಹಿರೇಗುಂಟನೂರು ಗ್ರಾಮದ ಬಾಲಕ ರೇವಣಸಿದ್ದಪ್ಪ ರಸ್ತೆ ದಾಟುತ್ತಿದ್ದಾಗ ಅದಿರು ಲಾರಿ ಡಿಕ್ಕಿ ಹೊಡೆದು ಆತ ಮೃತಪಟ್ಟಿದ್ದ. ಇದರಿಂದ ರೊಚ್ಚಿಗೆದ್ದ ಸುತ್ತಮುತ್ತಲಿನ ಗ್ರಾಮಸ್ಥರು 9 ಅದಿರು ತುಂಬಿದ ಲಾರಿಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ವಾಹನದ ಮೇಲೂ ಕಲ್ಲು ತೂರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next