Advertisement

ಸೇಡಿನ ರಾಜಕಾರಣ ನಿಲ್ಲಿಸದಿದ್ದರೆ ಹೋರಾಟ

04:48 PM May 07, 2019 | Team Udayavani |

ಚಿತ್ರದುರ್ಗ: ರಾಜ್ಯ ಸರ್ಕಾರ ಸೇಡಿನ ರಾಜಕಾರಣ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಎಸ್‌. ನವೀನ್‌ ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಗೃಹಮಂತ್ರಿ ಎಂ.ಬಿ. ಪಾಟೀಲ್ ಅವರ ದಬ್ಟಾಳಿಕೆ ಮಿತಿ ಮೀರಿದೆ. ಅವರ ನಡೆಯಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಮುಂದಾಗಬೇಕು ಎಂದರು.

ಭ್ರಷ್ಟ ಸಮ್ಮಿಶ್ರ ಸರ್ಕಾರ ಸಾಕಷ್ಟು ದುರಾಡಳಿತ ಮಾಡಿದೆ. ಈ ಸರ್ಕಾರದ ವಿರುದ್ಧ ಮಾತನಾಡುವ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ ದಾಖಲು ಮಾಡಿ ಜೈಲಿಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು, ಮಹಿಳೆಯರ ವಿರುದ್ಧ ಕೇಸ್‌ ದಾಖಲು ಮಾಡಿ ಜೈಲಿಗೆ ಕಳುಹಿಸುವ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ರಾಜ್ಯದಲ್ಲಿ ಜನರನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ನಡೆಸಿಕೊಳ್ಳತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

Advertisement

ರಾಜ್ಯ ಸರ್ಕಾರದ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಾಧ್ಯಮ ಸೇರಿದಂತೆ ಎದುರಾಳಿಗಳನ್ನು ಹತ್ತಿಕ್ಕಲು ನೇರವಾಗಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಷಡ್ಯಂತ್ರ ಮಾಡುತ್ತಿದ್ದಾರೆ. ಸಮಾಜದಲ್ಲಿ ಕಂದಕ ಸೃಷ್ಟಿಸಿ ಧರ್ಮಗಳ ಮಧ್ಯೆ ಸಂಘರ್ಷ ಉಂಟು ಮಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಬೇಕು ಎಂದು ಮಾತನಾಡಿದ ಬೇಳೂರು ಗೋಪಾಲಕೃಷ್ಣ ವಿರುದ್ಧ ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಜೆಡಿಎಸ್‌ ಶಾಸಕ ನಾರಾಯಣಗೌಡರು ನಟರಾದ ಯಶ್‌ ಮತ್ತು ದರ್ಶನ್‌ ವಿರುದ್ಧ ನೇರವಾಗಿ ಬೆದರಿಕೆ ಹಾಕಿದರು. ಇಂತಹ ಪ್ರಕರಣಗಳು ಜನರಲ್ಲಿ ದ್ವೇಷ ವಾತಾವರಣ ಮೂಡಿಸುವ, ಸಾಮಾಜಿಕ ಸಾಮರಸ್ಯ ಕೆಡಿಸುವಂತಹ ಗಂಭೀರ ಪ್ರಕರಣ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಇಂತಹವರಿಗೆ ರಕ್ಷಣೆ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರ ಟೀಕಿಸಿದ ಕಾರಣಕ್ಕೆ ಬಿಜೆಪಿ ಹಿತೈಷಿಗಳು ಮತ್ತು ಹಿರಿಯ ಪತ್ರಕರ್ತರನ್ನು ಕಾರಾಗೃಹಕ್ಕೆ ಕಳುಹಿಸಲು ಗೃಹ ಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ದಾವಣಗೆರೆ ಶೃತಿ ಬೆಳ್ಳಕ್ಕಿ, ಹೇಮಂತಕುಮಾರ್‌, ಮಹೇಶ್‌, ವಿಕ್ರಮ್‌ ಹೆಗಡೆ, ಶಾರದಾ ಡೈಮಾಂಡ್‌, ಅಜಿತ್‌ ಶೆಟ್ಟಿ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಇದು ಸೇಡಿನ ಕ್ರಮ ಎಂದು ವಾಗ್ಧಾಳಿ ಮಾಡಿದರು.

ಕೆಲವು ಪ್ರಕರಣಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್‌ 307ರ ಅನ್ವಯ ಪ್ರಕರಣ ದಾಖಲಾಗಿದ್ದರೂ ಸಹ ಕೇವಲ ಬಿಜೆಪಿ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳತ್ತಿದೆ. ಸಮ್ಮಿಶ್ರ ಸರ್ಕಾರ ದ್ವೇಷ, ಸೇಡಿನ ಆಡಳಿತ ಬಿಟ್ಟು ಅಭಿವೃದ್ಧಿಗೆ ಒತ್ತು ನೀಡಿ ಆಡಳಿತ ನಡೆಸಬೇಕು. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ಸರ್ಕಾರಕ್ಕೆ ತಿಳಿಸಬೇಕು ಎಂದು ಮನವಿ ಮಾಡಿದರು.

ಲೋಕಸಭಾ ಉಸ್ತುವಾರಿ ನರೇಂದ್ರನಾಥ್‌, ಪ್ರಧಾನ ಕಾರ್ಯದರ್ಶಿಗಳಾದ ರತ್ನಮ್ಮ, ಮರುಳಿ, ವೆಂಕಟೇಶ್‌ ಯಾದವ್‌, ಡಿ.ರಮೇಶ್‌, ನಾಗರಾಜ್‌ ಬೇದ್ರೆ, ಸಂಪತ್‌, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next