ಚಿತ್ರದುರ್ಗ: ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮುರಳಿ ಆಯ್ಕೆಯಾಗಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಮುಖಂಡರು, ಶಾಸಕರು ಹಾಗೂ ಆಕಾಂಕ್ಷಿಗಳ ಸಭೆಯಲ್ಲಿ ಮುರಳಿ ಅವರನ್ನು ನೂತನ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಜಿಲ್ಲಾಧ್ಯಕ್ಷ ನವೀನ್ ಹಾಗೂ ಆಕಾಂಕ್ಷಿಗಳ ಸಭೆಯಲ್ಲಿ ಮುರಳಿ ಆಯ್ಕೆಗೆ ಒಮ್ಮತಕ್ಕೆ ಬರಲಾಯಿತು ಎಂದು ಮೂಲಗಳು ತಿಳಿಸಿವೆ.
ಕಳೆದ ಆರು ತಿಂಗಳುಗಳಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲಿಂಗಮೂರ್ತಿ, ಟಿ. ಬದರೀನಾಥ್, ಹಾಲಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಯಪಾಲ್, ಮುರಳಿ ಮತ್ತಿತರರು ರೇಸ್ ನಲ್ಲಿದ್ದರು. ಅಂತಿಮವಾಗಿ ಯಾದವ ಸಮುದಾಯಕ್ಕೆ ಸೇರಿದ ಹಿರಿಯೂರು ತಾಲೂಕು ಆಲಮರದಹಟ್ಟಿ ಗ್ರಾಮದ ಮುರಳಿ ಹೆಸರನ್ನು ಒಮ್ಮತದಿಂದ ಘೋಷಣೆ ಮಾಡಲಾಯಿತು.
ಬಿಎಚ್‌ಎಂಎಸ್, ಫಾರ್ಮಸಿ ವಿದ್ಯಾಭ್ಯಾಸ ಮಾಡಿರುವ ಮುರಳಿ, ಈ ಹಿಂದೆ ಎರಡು ಅವ ಧಿಗೆ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಒಮ್ಮೆ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಈಗ ಜಿಲ್ಲಾಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಮುರಳಿ ಆಯ್ಕೆ ನಂತರ ಮಾತನಾಡಿದ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್, ಯಾವುದೇ ಶಿಫಾರಸ್ಸು, ಪ್ರಭಾವವಿಲ್ಲದೇ ಪಕ್ಷದ ನಾಯಕರು ನಿಷ್ಠಾವಂತ ಕಾರ್ಯಕರ್ತ ಎ. ಮುರಳಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷ ಸಂಘಟಿಸಲಿ ಎಂದು ಹಾರೈಸಿದರು.
ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದವರು ನಿರಾಶಾಗದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಇನ್ನೂ ಒಳ್ಳೆಯ ಜವಾಬ್ದಾರಿ ಸಿಗಲಿದೆ ಎಂದರು. ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್ ಮಾತನಾಡಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇನ್ನೂ ಅನೇಕರು ಸ್ಪರ್ಧಿಗಳಾಗಿದ್ದರು. ಪಕ್ಷ ಗುರುತಿಸಿ ಯಾರಿಗೆ ಜವಾಬ್ದಾರಿ ನೀಡಿದೆಯೋ ಅವರೊಂದಿಗೆ ಎಲ್ಲರೂ ಕೈಜೋಡಿಸಿ ಪಕ್ಷ ಸಂಘಟನೆಗೆ ಶ್ರಮಿಸಬೇಕು. ಮುಂದೆ ಸಾಕಷ್ಟು ಅವಕಾಶಗಳಿವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಬಿಜೆಪಿ ಅ ಧಿಕಾರ ನೀಡಲಿದೆ ಎನ್ನುವುದಕ್ಕೆ ಮುರಳಿ ಜಿಲ್ಲಾಧ್ಯಕ್ಷರಾಗಿರುವುದೇ ಸಾಕ್ಷಿ ಎಂದು ಹೇಳಿದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲಿಂಗಮೂರ್ತಿ, ಸಿದ್ದೇಶ್ ಯಾದವ್, ಮಲ್ಲಿಕಾರ್ಜುನ್, ಜೈಪಾಲ್, ರತ್ನಮ್ಮ, ನಾಗರಾಜ ಬೇದ್ರೆ, ನಂದಿ ನಾಗರಾಜ್ ಮತ್ತಿತರರು ಇದ್ದರು. ಚುನಾವಣಾಧಿಕಾರಿ ಸಿದ್ದರಾಮಣ್ಣ, ನೂತನ ಜಿಲ್ಲಾಧ್ಯಕ್ಷ ಎ. ಮುರಳಿ ಅವರ ಆಯ್ಕೆಯನ್ನು ಘೋಷಿಸಿದರು.