Advertisement

ಅಧಿಕಾರ ಹೆಗಲ ಮೇಲಿದ್ದರೆ ಜವಾಬ್ಧಾರಿ ಹೆಚ್ಚಳ

11:33 AM Feb 12, 2020 | Team Udayavani |

ಚಿತ್ರದುರ್ಗ: ಅಧಿಕಾರ ತಲೆಗೆ ಹೋದರೆ ಅಹಂಕಾರ ಬರುತ್ತೆ. ಆದರೆ, ಹೆಗಲಲ್ಲಿಟ್ಟುಕೊಂಡರೆ ಜವಾಬ್ದಾರಿಯಾಗುತ್ತದೆ. ಅದರ ಭಾರದ ಅರಿವಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹೇಳಿದರು.

Advertisement

ನಗರದ ಕಾಟಮ್ಮ ಪಟೇಲ್‌ ವೀರನಾಗಪ್ಪ ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಎ. ಮುರುಳಿ ಅವರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪಕ್ಷದಲ್ಲಿ ಅಧ್ಯಕ್ಷ ಸ್ಥಾನ ಒಂದು ಅಧಿಕಾರ ಅಲ್ಲ. ಅದೊಂದು ಜವಾಬ್ದಾರಿ. ಪಕ್ಷದಲ್ಲಿ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ. ಪಕ್ಷಕ್ಕೆ ಕಳಂಕ ಬಾರದಂತೆ ಜಿಲ್ಲೆ, ಮಂಡಲ ಹಾಗೂ ಬೂತ್‌ ಅಧ್ಯಕ್ಷರು ಮುಂದಿನ ಮೂರು ವರ್ಷ ಪಕ್ಷ ಸಂಘಟನೆ ಮಾಡಬೇಕು. ಪಕ್ಷದ ಕೆಲಸವನ್ನು ಜವಾಬ್ದಾರಿ ಎಂದು ತಿಳಿದು ಹೆಗಲ ಮೇಲೆ ಹೊತ್ತು ಸಾಗುವವರು ಬೇಕು. ನೇತಾಡುವವರು ನಮಗೆ ಬೇಡ. ನನ್ನ ಅವಧಿಯಲ್ಲಿ ನೇತಾಡುವವರಿಗೆ ಅವಕಾಶ ಇಲ್ಲ. ಕೆಲಸ, ಶ್ರಮ ಹಾಗೂ ಸಮಯ ಕೊಡುವವರನ್ನು ನಾವು ಎಂದೂ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.

ದೇಶ ವಿಭಜನೆಯಾದಾಗ ಪಾಕಿಸ್ತಾನದಲ್ಲಿ ಶೇ.27ರಷ್ಟಿದ್ದ ಅಲ್ಪ ಸಂಖ್ಯಾತರು ಈಗ ಶೇ.3ಕ್ಕೆ ಬಂದಿದ್ದಾರೆ. ಉಳಿದವರು ಎಲ್ಲಿ ಹೋದರು ಎಂದು ಕಾಂಗ್ರೆಸ್ಸಿನವರನ್ನು ಪ್ರಶ್ನೆ ಮಾಡಿ. ಪಾಕಿಸ್ತಾನದಿಂದ ಬರುವ ಅಲ್ಪ ಸಂಖ್ಯಾತರಿಗೆ ಭಾರತದ ಪೌರತ್ವ ನೀಡಿ ಎಂದು ಹಿಂದೆ ಗಾಂಧೀಜಿ ಹೇಳಿದ್ದರು. ಆದರೆ, ಅವರ ಟೋಪಿ
ಹಾಕಿಕೊಂಡಿರುವ ಕಾಂಗ್ರೆಸ್‌ ವಿಚಾರಗಳಿಗೆ ತಿಲಾಂಜಲಿ ಇಟ್ಟಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಗಾಂಧೀಜಿ ಹೇಳಿದ ಕೆಲಸ ಮಾಡುತ್ತಿದ್ದಾರೆ ಎಂದರು.

ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಮಾತನಾಡಿ, ಕುಗ್ರಾಮದಿಂದ ಬಂದ ಸಾಮಾನ್ಯ ಕಾರ್ಯಕರ್ತನನ್ನು ಜಗತ್ತಿನ ಅತೀ ದೊಡ್ಡ ಪಕ್ಷದ ಜಿಲ್ಲಾಧ್ಯಕ್ಷನನ್ನಾಗಿ ಮಾಡಿರುವುದು ನನ್ನ ಸೌಭಾಗ್ಯ. ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಜಿಲ್ಲೆಯ 1648 ಬೂತ್‌ಗಳಲ್ಲೂ ಪಕ್ಷವನ್ನು ಸದೃಢಗೊಳಿಸುತ್ತೇನೆ ಎಂದರು.

ಸದ್ಯದಲ್ಲೇ ಕಾರ್ಯಕರ್ತರ ಚುನಾವಣೆ ಎಂದೇ ಹೆಸರಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಇದೆ. ಅದರಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚು ಹೆಚ್ಚು ಗೆಲ್ಲಬೇಕು. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ನಮ್ಮ ಪಕ್ಷ ಅಧಿಕಾರದಲ್ಲಿರಬೇಕು ಎಂಬ ಪಕ್ಷದ ವರಿಷ್ಟರ ಮಾತಿನಂತೆ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ವಿಭಾಗ ಪ್ರಭಾರಿ ಜಿ.ಎಂ. ಸುರೇಶ್‌ ಮಾತನಾಡಿದರು. ಮಾಜಿ ಶಾಸಕರಾದ ಪಿ. ರಾಮಯ್ಯ, ಪಿ. ರಮೇಶ್‌, ಮುಖಂಡರಾದ ಸಿದ್ದೇಶ್‌ ಯಾದವ್‌, ಬದರೀನಾಥ್‌, ಲಿಂಗಮೂರ್ತಿ, ಜಯಪಾಲ್‌, ಮಲ್ಲಿಕಾರ್ಜುನ್‌, ಟಿ.ಜಿ. ನರೇಂದ್ರನಾಥ್‌, ಶ್ರೀನಿವಾಸ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next