ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಮೂರು ದಶಕಗಳ ಹೋರಾಟ, ಅನುಭವಿಸಿದ ಬವಣೆಗೆ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಕೊಂಚ ಸಮಾಧಾನ ಸಿಗುವ ಲಕ್ಷಣ ಗೋಚರವಾಗಿದೆ. ಜಿಲ್ಲೆಯ ಜನರ ಬಹುದಿನದ ಕನಸು ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಗೆ ನೀರು ಹರಿಸುವುದು. ಈ ಹಿನ್ನೆಲೆಯಲ್ಲಿ ನಡೆದ ಹೋರಾಟ ಒಂದೆರಡಲ್ಲ. ಪತ್ರಕರ್ತರು, ಮಠಾಧಿಧೀಶರು, ಹೋರಾಟಗಾರರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ರೈತರು ಸೇರಿದಂತೆ ಎಲ್ಲರೂ ಇದಕ್ಕಾಗಿ ಧ್ವನಿ ಎತ್ತಿದ್ದಾರೆ.
ಯೋಜನೆ ಮಂಜೂರಾಗಿ ಕಳೆದೊಂದು ದಶಕದಿಂದ ಭದ್ರಾ ಕಾಮಗಾರಿ ನಡೆಯುತ್ತಲೇ ಇದೆ. ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಮೂಲಕ ಜಿಲ್ಲೆಗೆ ನೀರು ತರುವ ಸಂಕಲ್ಪವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿ ಧಿಗಳು, ಹೋರಾಟಗಾರರು ಮಾಡಿದ್ದಾರೆ. ಈಗ ನೀರು ಹರಿಸಲು ದಿನಗಣನೆ ಆರಂಭವಾಗಿದೆ.
ಅಂತೆ ಕಂತೆಗಳ ಸಂತೆ : ಭದ್ರಾ ಎಂಬ ಎರಡು ಅಕ್ಷರಗಳು ಇಡೀ ಜಿಲ್ಲೆಯ ಜನರನ್ನು ತುದಿಗಾಲ ಮೇಲೆ ನಿಲ್ಲಿಸಿಬಿಟ್ಟಿವೆ. ನೀರು ಬಿಟ್ಟರಂತೆ, ಅಲ್ಲಿ ಬಂತಂತೆ, ಇಲ್ಲಿ ಬಂತಂತೆ. ಇವತ್ತು ಮಾರಿಕಣಿವೆ ಸೇರುತ್ತಂತೆ… ಹೀಗೆ ಅಂತೆ ಕಂತೆಗಳ ಸಂತೆಯೇ ಜಿಲ್ಲೆಯ ಜನರ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಅಂತೆ ಕಂತೆಗಳೆಲ್ಲಾ ಸುಳ್ಳು ಎಂದು ತಳ್ಳಿ ಹಾಕುವಂತಿಲ್ಲ.
ಜಿಲ್ಲೆಗೆ ಭದ್ರಾ ನೀರು ಹರಿಯುತ್ತೆ ಎಂಬ ಸಂಗತಿಯ ಅಕ್ಕಪಕ್ಕದಲ್ಲೇ ಈ ಅಂಶಗಳು ಗಿರಕಿ ಹೊಡೆಯುತ್ತಿವೆ. ತರೀಕೆರೆ, ಅಜ್ಜಂಪುರ ಭಾಗದಲ್ಲಿ ಭದ್ರಾ ಮೇಲ್ದಂಡೆ ನೀರು ಬಿಡ್ತಾರಂತೆ, ದನ ಕರು, ಮಕ್ಕಳನ್ನು ಹಳ್ಳದ ಕಡೆಗೆ ಬಿಡಬಾರದಪ್ಪೋ ಎಂದು ತಮಟೆ ಸಾರಿದ ವಿಡಿಯೋ ಜಿಲ್ಲೆಯ ಜನರ ಇಷ್ಟು ವರ್ಷಗಳ ತಾಳ್ಮೆ ಎಂಬ ಸಿನಿಮಾದ ಟ್ರೇಲರ್‌ನಂತೆ ಕಾಣಿಸುತ್ತಿದೆ. ತಾಯಿ ಭದ್ರೆ, ವೇದಾವತಿ ಮೂಲಕ ಹರಿದು ಮಾರಿಕಣಿವೆಯ ಮಡಿಲು ಸೇರಲು ಉತ್ಸುಕಳಾಗಿದ್ದಾಳೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. 7 ಕಿಮೀ ಸುರಂಗ ಹಾಗೂ ಕಾಲುವೆಯಲ್ಲಿ ಶೇಖರಣೆಯಾಗಿರುವ ನೀರನ್ನು ಮೊದಲು ಖಾಲಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಟನಲ್ ಒಳಗಿದ್ದ ನೀರನ್ನು ಮುಂದಕ್ಕೆ ಹರಿಸುತ್ತಿದ್ದಾರೆ. ಅನೇಕರು ಇದೇ ಭದ್ರಾ ನೀರು ಎಂಬಂತೆ ಖುಷಿಪಡುತ್ತಿದ್ದಾರೆ. ಆದರೆ ಪಿಚ್ಚರ್ ಅಭೀ ಭಾಕೀ ಹೈ ಎನ್ನುತ್ತಿದ್ದಾರೆ ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್‌ಗಳು.
ಮೂರ್‍ನಾಲ್ಕು ದಿನದಲ್ಲಿ ನೀರು ಪಂಪಿಂಗ್: ಅಜ್ಜಂಪುರ ಬಳಿ ಇರುವ ರೈಲ್ವೇ ಕ್ರಾಸಿಂಗ್ ಬಳಿ ಒಂದು ಪೈಪ್ ಮಾತ್ರ ಅಳವಡಿಸಿರುವುದರಿಂದ ಸದ್ಯಕ್ಕೆ ಒಂದು ಪಂಪ್‌ನಿಂದ ಮಾತ್ರ ನೀರು ಹರಿಯಲಿದೆ. ದಿನವೊಂದಕ್ಕೆ 560 ರಿಂದ 600 ಕ್ಯೂಸೆಕ್ ನೀರು ಹರಿಸಲಾಗುವುದು ಎಂಬುದು ಭದ್ರಾ ಮೇಲ್ದಂಡೆ ಯೋಜನೆ ಇಂಜಿನಿಯರ್‌ಗಳ ಹೇಳಿಕೆ.
ಈಗಾಗಲೇ ಟ್ರಾನ್ಸ್‌ಫಾರಂ ರ್‌ಗಳನ್ನು ಚಾರ್ಜ್ ಮಾಡುತ್ತಿದ್ದು, ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಪಂಪ್ ಮಾಡಲು ಆರಂಭಿಸಲಾಗುವುದು. ಮೂರು ದಿನಗಳಿಂದ ಭದ್ರಾ ಟನಲ್ ಒಳಗಿರುವ ನೀರನ್ನು ಖಾಲಿ ಮಾಡುತ್ತಿದ್ದು, ಈ ನೀರೇ ಈಗಾಗಲೇ ಕುಕ್ಕಸಮುದ್ರ ಕೆರೆ ಸೇರಿ ಕೋಡಿ ಬಿದ್ದು ಅಲ್ಲಿಂದ ಮುಂದೆ ವೇದಾವತಿ ಸೇರಿ ಆಗಿದೆ. ಇನ್ನು ಭದ್ರಾ ನೀರನ್ನು ಹರಿಸಿದರೆ ಒಂದು ಹನಿಯೂ ವ್ಯರ್ಥವಾಗದಂತೆ ಸೀದಾ ಹೋಗಿ ಮಾರಿಕಣಿವೆ ಸೇರುವುದರಲ್ಲಿ ಎರಡು ಮಾತಿಲ್ಲ.