ಚಿತ್ರದುರ್ಗ: ವಿದ್ಯುತ್ ಮೀಟರ್ ವಾಪಸ್ ನೀಡಿದ್ದ ತಾಲೂಕಿನ ಚಿಕ್ಕಕಬ್ಬಿಗೆರೆ ಗ್ರಾಮದ ರೈತರಿಂದ ಬೆಸ್ಕಾಂ ಜಾಗೃತ ದಳದ ಪೊಲೀಸರು ಖಾಲಿ ಕಾಗದ ಪತ್ರದಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬುಧವಾರ ಬೆಸ್ಕಾಂ ಜಾಗೃತ ದಳದ ಪೊಲೀಸ್ ಕಚೇರಿ ಮುಂಭಾಗದಲ್ಲಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ಚಿಕ್ಕಗಬ್ಬಿಗೆರೆಯಲ್ಲಿ ಜ. 28 ರಂದು ಬೆಸ್ಕಾಂ ಜಾಗೃತ ದಳದ ಪೊಲೀಸರು ಸುಮಾರು 50 ಮನೆಗಳ ಮೇಲೆ ದಾಳಿ ನಡೆಸಿ ದೌರ್ಜನ್ಯವೆಸಗಿ ಅವರಿಂದ ಬಿಳಿ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಈಗಾಗಲೇ ಬೆಸ್ಕಾಂನ ಅಸಾಂವಿಧಾನಿಕ ನಿಯಮಗಳಿಂದ ವಿದ್ಯುತ್ ಮೀಟರ್ ವಾಪಸ್ ಮಾಡುವ ಚಳವಳಿಯನ್ನು ಕಳೆದ 2003ರಲ್ಲಿಯೇ ಹಮ್ಮಿಕೊಂಡು ಜಿಲ್ಲಾಧಿಕಾರಿಗಳ ಮೂಲಕ ಹಿಂದಿರುಗಿಸಲಾಗಿತ್ತು. ಇದೀಗ ಬೆಸ್ಕಾಂ ಜಾಗೃತ ದಳದ ಪೊಲೀಸರು ವೈಯಕ್ತಿಕ ಲೆಕ್ಕಾಚಾರದಲ್ಲಿ ದಾಳಿ ನಡೆಸಿ ರೈತರ ಮೇಲೆ ದೌರ್ಜನ್ಯ ನಡೆಸಿ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ.
ಕೂಡಲೇ ಸಹಿ ಹಾಕಿಸಿಕೊಂಡಿರುವ ಖಾಲಿ ಪತ್ರವನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು. ಪೊಲೀಸರು ರೈತರ ಮನೆಗಳಿಗೆ ನುಗ್ಗಿದ ವೇಳೆ ಬೂಟು ಹಾಕಿಕೊಂಡು ಹೋಗಿದ್ದಾರೆ. ಧಾರ್ಮಿಕ ಆಚರಣೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಮಳೆ, ಬೆಳೆ ಇಲ್ಲದೆ, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಮೀಟರ್ ಅಳವಡಿಸಿಲ್ಲ, ಮೀಟರ್ ಅಳವಡಿಸಿಕೊಡಲಾಗುವು ಎಂದು ದೌರ್ಜನ್ಯವೆಸಗಿ ಸಹಿ ಹಾಕಿಸಿಕೊಂಡು ಪ್ರಕರಣ ದಾಖಲಿಸಲು ಸಂಚು ರೂಪಿಸಿದ್ದಾರೆ. ಇಂತಹ ಕ್ರಮ ಕೈಗೊಂಡಿರುವ ಅಧಿಕಾರಿಗಳು ತಮ್ಮ ಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲವಾದರೆ ಅಮಾನತ್ತು ಆಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಬೆಸ್ಕಾಂ ಜಾಗೃತ ದಳದ ಪೊಲೀಸ್ ನಿರೀಕ್ಷಕಿ ಲತಾ ಮಾತನಾಡಿ, ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವವರ ಮೇಲೆ ದಾಳಿ ನಡೆಸುವುದು ನಮ್ಮ ಕರ್ತವ್ಯ. ಚಿಕ್ಕಕಬ್ಬಿಗೆರೆ ಗ್ರಾಮದಲ್ಲಿ ಮಹಜರ್ ಪತ್ರಕ್ಕೆ ಇಬ್ಬರಿಂದ ಸಹಿ ಮಾಡಿಸಿಕೊಳ್ಳಲಾಗಿದೆ ಅಷ್ಟೇ. ಯಾವುದೇ ರೈತರ ಮೇಲೆ ಪ್ರಕರಣ ದಾಖಲಿಸುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ಸಿಟ್ಟಿಗೆದ್ದ ಕೆಲವು ರೈತರು, ಇಬ್ಬರು ರೈತರ ಬಳಿ ಮಹಜರ್ ಮಾಡಿಸಲಿಕ್ಕೆ ಸಹಿ ಮಾಡಿಸಿಕೊಂಡಿಲ್ಲ ಸುಮಾರು 50 ರೈತರ ಬಳಿ ಉದ್ದೇಶಪೂರ್ವಕವಾಗಿ ಸಹಿ ಮಾಡಿಸಿಕೊಳ್ಳಲಾಗಿದೆ. ಮಹಜರ್ ಮಾಡುವುದಕ್ಕಾಗಿ ಸಹಿ ಹಾಕಿಸಿದ್ದರೆ ಪತ್ರದಲ್ಲಿ ವಿವರ ಇರಬೇಕಿತ್ತು. ಆದರೆ ಖಾಲಿ ಪತ್ರದಲ್ಲಿ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಸ್ಕಾಂ ಜಾಗೃತ ದಳದ ಎಇಇ ರಶೀದಾಬಾನು ಮಧ್ಯ ಪ್ರವೇಶಿಸಿ, ಜ. 28ರಂದು ನಡೆದ ದಾಳಿಯಲ್ಲಿ ಯಾವುದೇ ರೈತರ ಮೇಲೆ ಪ್ರಕರಣ ದಾಖಲಿಸುವುದಿಲ್ಲ. ಕಾನೂನು ರೀತ್ಯ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರೆ ಅಂಥವರ ಮೇಲೆ ದಾಳಿ ನಡೆಸಲಾಗುವುದು. ಎಲ್ಲರೂ ತ್ವರಿತಗತಿಯಲ್ಲಿ ವಿದ್ಯುತ್ ಮೀಟರ್ ಅಳವಡಿಸಿಕೊಳ್ಳಿ ಎಂದು ಮನವಿ ಮಾಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.