Advertisement

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

05:30 PM May 08, 2024 | Team Udayavani |

■ ಉದಯವಾಣಿ ಸಮಾಚಾರ
ಚಿತ್ರದುರ್ಗ: ದಾವಣಗೆರೆ ವಿರಕ್ತಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಮೃತ್ಯುಂಜಯ ಅಪ್ಪಗಳು ಹಾಗೂ ಅವರೊಂದಿಗೆ ಹೆಗಲಾಗಿದ್ದ ಹಡೇìಕರ್‌ ಮಂಜಪ್ಪ ಬಸವ ಜಯಂತಿ ಪ್ರವರ್ತಕರು. ಬಸವಣ್ಣನವರ ಸಾಧನೆಯ ವಿವಿಧ ಆಯಾಮಗಳ ಬಗ್ಗೆ ಗಮನಹರಿಸಿ ಅಂದು ಜಯಂತಿ ಆಚರಣೆ ಆರಂಭಿಸದಿದ್ದರೆ ಇಂದು ಬಸವಣ್ಣನವರು ಅರ್ಥವಾಗಿರುತ್ತಿರಲಿಲ್ಲ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ| ಬಸವಕುಮಾರ ಸ್ವಾಮೀಜಿ ಹೇಳಿದರು.

Advertisement

ಬಸವ ಜಯಂತಿ ಆಚರಣೆ ಅಂಗವಾಗಿ ಶ್ರೀಮಠದ ಅನುಭವ ಮಂಟಪದಲ್ಲಿ ಕರೆದಿದ್ದ ಎಸ್‌.ಜೆ.ಎಂ ವಿದ್ಯಾಪೀಠದ ನೌಕರರ ಸಮಲೋಚನಾ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು. ಬಸವ ಜಯಂತಿಗೆ ಮತ್ತಷ್ಟು ಹೆಗಲೆಣೆಯಾಗಿ ವಚನ ಸಾಹಿತ್ಯ ಜನಮಾನಸಕ್ಕೆ ತಲುಪುವಂತಾಗಲು ತಮ್ಮ ಮನೆ ಮಠ ಕಳೆದುಕೊಂಡು ಕೆಲಸ ಮಾಡಿದವರು ವಚನ ಪಿತಾಮಹ ಎಂದು ಹೆಸರಾಗಿದ್ದ ಫ.ಗು. ಹಳಕಟ್ಟಿ ಎಂದು ಸ್ಮರಿಸಿದರು. ದುಡಿಯುವ ವರ್ಗವನ್ನು ದೇವರೆಂದು, ಕಾಯಕ ಯಾವುದೇ ಇರಲಿ
ಅವರೆಲ್ಲರಿಗೂ ವೃತ್ತಿಗೌರವ ನೀಡಿ ಅದಕ್ಕೆ ತಕ್ಕ ಮೌಲ್ಯ ದೊರಕಿಸಿಕೊಟ್ಟ ಮಹಾ ಮೇರುಪುರುಷ ಬಸವಣ್ಣನವರು ಎಂದು ಬಣ್ಣಿಸಿದರು.

ಬಸವಣ್ಣ ಮತ್ತು ಅವರ ವಿಚಾರಗಳು ಪ್ರತಿ ಮನೆ ಮನ ತಲುಪಬೇಕು. ಆ ನಿಟ್ಟಿನಲ್ಲಿ ಮೊದಲು ನಮ್ಮ ವಿದ್ಯಾಪೀಠದ ನೌಕರ ಬಾಂಧವರಿಗೆ ಗೊತ್ತಾಗಬೇಕೆಂಬ ಉದ್ದೇಶದಿಂದ ನಿಮ್ಮನ್ನು ಇಲ್ಲಿ ಸೇರಿಸಲಾಗಿದೆ. ಚಿತ್ರದುರ್ಗ ಶ್ರೀ ಮುರುಘಾ ಮಠದ ಖಾಸಾ ಮಠ ದಾವಣಗೆರೆ ವಿರಕ್ತಮಠ. ಅಲ್ಲಿ ಮೊಟ್ಟಮೊದಲು ಬಸವ ಜಯಂತಿ ಆಚರಿಸಿದ ಕೀರ್ತಿ ನಮ್ಮ ಮುರುಘಾಮಠಕ್ಕೆ ಸಲ್ಲುತ್ತದೆ. ಆದ್ದರಿಂದ ಬಸವ ಜಯಂತಿ ನಮ್ಮ ಸಂಸ್ಥಾನದ ಹಬ್ಬ. ಆದ್ದರಿಂದ ನೀವೆಲ್ಲರೂ ಮೂರು ದಿನಗಳ ಕಾಲ ನಡೆಯುವ
ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಬೇಕೆಂದರು.

ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಸಿ. ಶಿವಯೋಗಿ ಕಳಸದ ಮಾತನಾಡಿ, 111 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಬಸವ ಜಯಂತಿ ಸಮಾರಂಭವನ್ನು ದಾವಣಗೆರೆ ವಿರಕ್ತ ಮಠದಲ್ಲಿ ಆಚರಣೆಗೆ ಚಾಲನೆ ನೀಡಲಾಯಿತು. ಅದರಂತೆ ಈ ಬಾರಿಯೂ ಸಹ ಶ್ರೀಮಠದಲ್ಲಿ ಬಸವೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಯಶಸ್ವಿಯಾಗಿ ನಡೆಸಲು ಬಸವಕೇಂದ್ರಗಳು, ಭಕ್ತಾದಿಗಳು, ಧಾರ್ಮಿಕ ಮುಖಂಡರು, ಮುಖ್ಯವಾಗಿ ಎಸ್‌.ಜೆ.ಎಂ ವಿದ್ಯಾಪೀಠದ ನೌಕರ ವರ್ಗದವರ ಸೇವೆಯೂ ಕಾರಣ ಎಂದರು.

ಈ ಬಾರಿಯ ಬಸವೇಶ್ವರ ಜಯಂತಿಯನ್ನು ಮೇ 8, 9 ಮತ್ತು 10ರಂದು ಮೂರು ದಿನಗಳು ಆಚರಿಸಲು ತೀರ್ಮಾನಿಸಲಾಗಿದೆ. ಎಸ್‌.ಜೆ.ಎಂ ವಿದ್ಯಾಪೀಠದಡಿ ಬರುವ ಎಲ್ಲಾ ಶಾಲಾ-ಕಾಲೇಜುಗಳು, ಹಾಸ್ಟೆಲ್‌ಗ‌ಳ ಮುಖ್ಯಸ್ಥರು, ನೌಕರವರ್ಗದವರು ಸಂಪೂರ್ಣವಾಗಿ ತೊಡಗಿಸಿ  ಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾಪೀಠದ ಅಡಿಯಲ್ಲಿ ಬರುವ ಶಾಲಾ- ಕಾಲೇಜು ಗಳು ಮತ್ತು ಇನ್ನಿತರ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ತೋಟಪ್ಪ ಮತ್ತು ಸಂಗಡಿಗರು ವಚನಗಳನ್ನು ಹಾಡಿದರು. ಅನು ಲಿಂಗರಾಜು ಸ್ವಾಗತಿಸಿದರು. ನೇತ್ರಾವತಿ ನಿರೂಪಿಸಿದರು. ಲಿಂಗರಾಜು ಶರಣು ಸಮರ್ಪಣೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next