Advertisement

ತ್ಯಾಜ್ಯದಿಂದ ತಯಾರಿಸಿದ ಇಟ್ಟಿಗೆಗೆ ಅವಾರ್ಡ್‌!

07:36 PM Sep 21, 2019 | Naveen |

„ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
ಹಳೆಯ ಮನೆಗಳನ್ನು ಕೆಡವಿದ ನಂತರ ಬರುವ ತ್ಯಾಜ್ಯದಿಂದ ತಯಾರಿಸಿದ ಇಟ್ಟಿಗೆಗೆ ಅವಾರ್ಡ್‌ ಸಿಕ್ಕಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಇಂಥದ್ದೊಂದು ಪ್ರಯೋಗ ನಡೆದಿದ್ದು, ರಾಜ್ಯದ ನಗರಾಭಿವೃದ್ಧಿ ಇಲಾಖೆ ಬೆಸ್ಟ್‌ ಪ್ರಾಕ್ಟಿಸಸ್‌ ಅವಾರ್ಡ್‌ ನೀಡಿ ಪ್ರೋತ್ಸಾಹಿಸಿದೆ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌ ಅವರು, ಗುರುವಾರ ಬೆಂಗಳೂರಿನ ಚೌಡಯ್ಯ ಮೆಮೊರಿಯಲ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

Advertisement

ಹಳೆಯ ಮನೆಗಳ ತ್ಯಾಜ್ಯವನ್ನು ಸೋಸಿ ಅದರಿಂದ ಸುಮಾರು 45 ಇಟ್ಟಿಗೆಗಳನ್ನು ತಯಾರಿಸಲಾಗಿದೆ. ನಂತರ ವ್ಯಾಸ ಅಸೋಸಿಯೇಷನ್‌ ಎಂಬ ಸಂಸ್ಥೆಯಿಂದ ಇದರ
ಗುಣಮಟ್ಟ ಪರಿಶೀಲಿಸಲಾಗಿದೆ. ಈ ವೇಳೆ ಇಟ್ಟಿಗೆಗಳು ಬಳಕೆಗೆ ಯೋಗ್ಯ ಎಂದು ಪ್ರಮಾಣ
ಪತ್ರ ನೀಡಿದ್ದು, ಇದನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದು, ಇದೊಂದು ಹೊಸ ಪ್ರಯೋಗ, ಒಳ್ಳೆಯ ಪದ್ಧತಿ ಎಂದು ಗುರುತಿಸಿ ಅವಾರ್ಡ್‌ ನೀಡಲಾಗಿದೆ. ಈ ಮೂಲಕ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ಡೆಬ್ರಿಸ್‌ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣ ಕಾಣಿಸುತ್ತಿದೆ.

ನಗರವನ್ನು ಪ್ರವೇಶಿಸುವ ರಸ್ತೆಗಳ ಆಸುಪಾಸು, ಖಾಲಿ ನಿವೇಶನ, ಜನ ಸಂಚಾರ ವಿರಳವಾಗಿರುವ ಪ್ರದೇಶಗಳಲ್ಲಿ ರಾತ್ರೋ ರಾತ್ರಿ ತಂದು ಸುರಿಯುತ್ತಿದ್ದ ಹಳೆಯ ಮನೆಗ ತ್ಯಾಜ್ಯ
ನಗರಸಭೆಗೆ ಸವಾಲಾಗಿತ್ತು. ಹೊಳಲ್ಕೆರೆ ರಸ್ತೆ, ಚಂದ್ರವಳ್ಳಿ ಬಳಿ ಹಾಗೂ ಎಸ್‌ಜೆಎಂ ಕಾಲೇಜುವರೆಗೆ ದೊಡ್ಡ ಮಟ್ಟದಲ್ಲಿ ಹಳೆಯ ಮನೆಗಳನ್ನು ಕೆಡವಿದ ತ್ಯಾಜ್ಯವನ್ನು ಸಾವಿರಾರು ಲೋಡ್‌ ತಂದು ಸುರಿಯಲಾಗಿತ್ತು. ಇದೇ ವಿಚಾರವಾಗಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ನಗರಸಭೆ ಅಧಿ ಕಾರಿಗಳನ್ನು ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಈಗ ಈ ಹೊಸ ಪ್ರಯೋಗದಿಂದ ತ್ಯಾಜ್ಯ ಸಮಸ್ಯೆಗೆ ಸ್ವಲ್ಪ ಮುಕ್ತಿ ಸಿಗಬಹುದು.

ದೊಡ್ಡ ಮಟ್ಟದಲ್ಲಿ ತಯಾರಿಗೆ ಚಿಂತನೆ: ತ್ಯಾಜ್ಯದಿಂದ ಇಟ್ಟಿಗೆ ತಯಾರಿ ಮಾಡುವ ಪ್ರಯೋಗ ಯಶಸ್ವಿಯಾಗಿದ್ದು, ಈಗ ಅದನ್ನು ದೊಡ್ಡ ಮಟ್ಟದಲ್ಲಿ ಅನುಷ್ಠಾನಕ್ಕೆ ತರುವ ಪ್ರಯತ್ನಕ್ಕೆ ನಗರಾಭಿವೃದ್ಧಿ ಕೋಶ ಚಿಂತನೆ ನಡೆಸಿದೆ.

ನಗರದಲ್ಲಿ ಕೆಡವಿದ ಮನೆಗಳ ತ್ಯಾಜ್ಯ ಸುರಿಯಲು ಸರಿಯಾದ ಜಾಗವೂ ಇಲ್ಲ. ಈಗ
ಒಂದು ಹೆಲ್ಪ್ಲೈನ್‌ ಆರಂಭಿಸಿ, ಅದರ ಮೂಲಕ ಮನೆ ಕೆಡವಿದವರು ನಗರಸಭೆಗೆ ಫೋನ್‌ ಮಾಡಿ ಹೇಳಿದರೆ ಸಾಕು, ನಗರಸಭೆಯ ವಾಹನ ನಿಮ್ಮ ಮನೆ ಮುಂದೆ ಬಂದು ನಿಲ್ಲುತ್ತದೆ. ತ್ಯಾಜ್ಯವನ್ನು ತುಂಬಿಕೊಂಡು ಇಟ್ಟಿಗೆ ತಯಾರಿಸುವ ಸೈಟ್‌ಗೆ ರವಾನೆ ಮಾಡಲಾಗುತ್ತದೆ. ಇದಕ್ಕಾಗಿ ಇಂತಿಷ್ಟು ಶುಲ್ಕವನ್ನೂ ನಿಗದಿ  ಮಾಡಲಾಗುವುದು. ಇದರಿಂದ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿದು ವ್ಯರ್ಥ ಮಾಡುವ ಸಮಸ್ಯೆಗೆ ಪರಿಹಾರದ ಜತೆಗೆ ನಗರಸಭೆಗೆ ಆದಾಯವೂ ಬರುತ್ತದೆ. ಜತೆಗೆ ಇಟ್ಟಿಗೆಗಳ ಗುಣಮಟ್ಟದ ಮೇಲೆ ಜನರಿಗೆ ನಂಬಿಕೆ ಬಂದರೆ ಮತ್ತೂಂದು ಉದ್ದಿಮೆಗೆ ಅವಕಾಶವೂ ಸಿಕ್ಕಂತಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next