ಚಿತ್ರದುರ್ಗ: ಸೆಸ್ ಇಳಿಕೆಯಿಂದ ಅಭಿವೃದ್ಧಿ ಕೆಲಸಗಳ ಬಗ್ಗೆ ಯೋಚನೆಯನ್ನೂ ಮಾಡಲಾಗದ ಸ್ಥಿತಿಗೆ ಎಪಿಎಂಸಿಗಳು ಸಿಲುಕಿವೆ. ಈ ಹೊತ್ತಿನಲ್ಲಿ ಚಿತ್ರದುರ್ಗ ಎಪಿಎಂಸಿ ಪ್ರಾಂಗಣದಲ್ಲಿ ಭರಪೂರ ಕಾಮಗಾರಿಗಳು ನಡೆಯುತ್ತಿವೆ. ಇದಕ್ಕೆ ಕಾರಣ ರೈಲ್ವೆ ಇಲಾಖೆ. ಚಿತ್ರದುರ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದೊಳಗೆ ಹಾದು ಹೋಗಿರುವ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಇಷ್ಟಕ್ಕೆಲ್ಲಾ ಕಾರಣವಾಗಿದೆ.
ನೈರುತ್ಯ ರೈಲ್ವೆ ವಲಯದಿಂದ ರೈಲ್ವೆ ಹಳಿಗಳ ವಿದ್ಯುದ್ದೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ಹಳಿಯ ಮೇಲೆ ನಿರ್ಮಿಸಿದ್ದ ಸೇತುವೆಯು ವಿದ್ಯುದ್ದೀಕರಣಕ್ಕೆ ತೊಡಕಾಗಿ ಪರಿಣಮಿಸಿತ್ತು. ಈಗ ಏಳು ಅಡಿ ಎತ್ತರದ ಹೊಸ ಸೇತುವೆ ನಿರ್ಮಿಸುವ ಅಗತ್ಯವಿದೆ. ಇದರಿಂದ ಎಪಿಎಂಸಿ ಆವರಣದ ಸೌಂದರ್ಯಕ್ಕೆ ಚ್ಯುತಿ ಉಂಟಾಗುವ ಆತಂಕ ಎದುರಾಗಿತ್ತು. ಇದಕ್ಕೆ ಪರಿಹಾರ ರೂಪದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗೆ ರೈಲ್ವೆ ಇಲಾಖೆ ಆಸಕ್ತಿ ತೋರಿದೆ.
ರೈಲ್ವೆ ಇಲಾಖೆ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಕೊಡಲು ವಾಗ್ಧಾನ ಮಾಡಿದೆ. ಇದರಿಂದ ಇಲ್ಲಿನ ವರ್ತಕರು, ಅ ಧಿಕಾರಿಗಳು ಹಾಗೂ ರೈತರು ಸಂತಸಗೊಂಡಿದ್ದಾರೆ. ವರ್ಷಾಂತ್ಯಕ್ಕೆ ಹೈಟೆಕ್ ಆಗಲಿದೆ ಎಪಿಎಂಸಿ: ಮುಂದಿನ 8 ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ 4 ರಿಂದ ಎಪಿಎಂಸಿ ಪ್ರವೇಶಿಸುವ ರಸ್ತೆ ಡಿವೈಡರ್, ಫುಟ್‌ಪಾತ್, ಪೇವರ್, ಮಧ್ಯದಲ್ಲಿ ವಿದ್ಯುತ್ ದೀಪಗಳು, ಬಾಕ್ಸ್ ಚರಂಡಿ, ಫ್ಲೈಓವರ್, ರಸ್ತೆ ಜೀರೋ ಲೆವೆಲ್‌ಗೆ ಬಂದ ಸ್ಥಳದಲ್ಲಿ ಜಂಕ್ಷನ್ ನಿರ್ಮಾಣ ಮಾಡಿಕೊಡಲು ರೈಲ್ವೆ ಇಲಾಖೆ ಎಪಿಎಂಸಿ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಡೆಯ ಪ್ರವೇಶ ದ್ವಾರದಿಂದ “ಸಿ ಮತ್ತು ಡಿ’ ಬ್ಲಾಕ್ ವರೆಗಿನ ರಸ್ತೆ ಮೆರುಗು ಪಡೆಯಲಿದೆ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ, ಪಾದಚಾರಿ ಮಾರ್ಗ ನಿರ್ಮಾಣವಾಗಲಿವೆ. “ಇ ಮತ್ತು ಎಫ್’ ಬ್ಲಾಕ್‌ಗೆ ಕೆಳಸೇತುವೆ ಮೂಲಕ ಪ್ರವೇಶ ಕಲ್ಪಿಸಲಾಗುತ್ತದೆ. ಜಂಕ್ಷನ್ ನಿರ್ಮಿಸಿ ವಾಹನಗಳು ಸಾಗಲು ಅವಕಾಶ ಕಲ್ಪಿಸಲಾಗುವುದು.
86 ಎಕರೆ ವಿಸ್ತೀರ್ಣದಲ್ಲಿರುವ ಎಪಿಎಂಸಿಯಲ್ಲಿ 336 ಮಳಿಗೆಗಳಿವೆ. ಮಾರುಕಟ್ಟೆಯ ಮಧ್ಯಭಾಗದಲ್ಲಿರೈಲ್ವೆ ಹಳಿ ಹಾದು ಹೋಗಿದೆ. ರೈಲ್ವೆ ಹಳಿ ಸಮೀಪ ನಿರ್ಮಾಣವಾಗುವ ಸೇತುವೆಯಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸಲು ರೈಲ್ವೆ ಇಲಾಖೆ ಒಪ್ಪಿಕೊಂಡಿದೆ. ಅಂಗಡಿಗಳಿಗೆ ಮೆಟ್ಟಿಲು, ರ್‍ಯಾಂಪ್ ನಿರ್ಮಿಸಿಕೊಡುವುದಾಗಿ ಆಶ್ವಾಸನೆ ನೀಡಿದೆ. ಎಪಿಎಂಸಿ ಆವರಣದಲ್ಲಿರುವ ಬೀದಿ ದೀಪಗಳು ಹೊಸರೂಪ ಪಡೆಯಲಿವೆ. ದಾವಣಗೆರೆ ರಸ್ತೆಯಿಂದ ಪ್ರವೇಶ ಪಡೆಯುವ “ಡಿ’ ಬ್ಲಾಕ್ ಹಾಗೂ ಹೂವಿನ ಮಾರುಕಟ್ಟೆ ಬಳಿ ಕಮಾನು ನಿರ್ಮಿಸಲಾಗುವುದು.
ತಿಪ್ಪೇಸ್ವಾಮಿ ನಾಕೀಕೆರೆ