ಚಿತ್ರದುರ್ಗ: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಸಕ್ತ ಸಾಲಿನ 95 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.
ನಗರದ ತಮಟಕಲ್ಲು ರಸ್ತೆಯಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಶನಿವಾರ ಯೋಜನಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ.
ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ 25ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಬರುವ 95 ತಾಲೂಕುಗಳಿಗೆ ತಲಾ 1 ಕೋಟಿ ರೂ. ಅನುದಾನ ನಿಗದಿಪಡಿಸಲಾಯಿತು.
ಅರಸಿಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ಶಾಸಕರ ಕಡೆಯಿಂದ ಮಂಜೂರಾದ ಕಾಮಗಾರಿಗಳನ್ನು ತಹಶೀಲ್ದಾರ್ ಪರಿಶೀಲನೆ ನಡೆಸುತ್ತಾರೆ. ಇದು ಸರಿಯಲ್ಲ. ಅವರಿಗೆ ಕಾಮಗಾರಿಗಳ ಬಗ್ಗೆ ಯಾವ ಜ್ಞಾನ ಇರುತ್ತದೆ ಎಂದು ಪ್ರಶ್ನಿಸಿದರು. ಮೂರನೇ ಪಾರ್ಟಿ ಅಥವಾ ಸಂಬಂಧಪಟ್ಟ ಇಂಜಿನಿಯರ್‌ಗಳಿಂದ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಯೋಜನಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಬಯಲುಸೀಮೆ ಪ್ರದೇಶಭಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 14 ಜಿಲ್ಲೆಗಳ 87 ತಾಲೂಕುಗಳಿವೆ. ಎಲ್ಲಾ ಕಡೆ ಕೃಷಿ ಸಂಬಂಧಿತ ಮಣ್ಣು ಮತ್ತು ನೀರು ಸಂರಕ್ಷಣೆ, ಅರಣ್ಯೀಕರಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಎರಡನೇ ಆದ್ಯತೆಯಾಗಿ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಚರಂಡಿ, ಶಾಲೆಗಳ ಕೊಠಡಿ, ಅಂಗನವಾಡಿ, ಆರೋಗ್ಯ ಕೇಂದ್ರ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರಿ ಜಮೀನಿನಲ್ಲಿ ಸಮುದಾಯ ಭವನ, ವ್ಯಾಯಾಮ ಶಾಲೆ, ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದರು.
ಮಂಡಳಿಯಿಂದ ಕೈಗೊಂಡ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಇದಕ್ಕಾಗಿ ವರ್ಕ್‌ಸಾಫ್ಟ್ ಎಂಬ ನೂತನ ಸಾಫ್ಟ್‌ವೇರ್ ಇದ್ದು, ಇದರಲ್ಲಿ ಕಾಮಗಾರಿಗಳ ವಿವರಗಳನ್ನು ಅಪ್‌ಲೋಡ್ ಮಾಡಿದ ತಿಂಗಳೊಳಗೆ ಶಾಸಕರಿಗೆ ಮಾಹಿತಿ ಹೋಗುತ್ತದೆ. ಸಂಬಂಧಿಸಿದ ಏಜೆನ್ಸಿಗಳು 30 ದಿನದಲ್ಲಿ ಅಂದಾಜು ಪಟ್ಟಿ ತಯಾರಿಸಿ ಕೊಡಬೇಕು. ನಂತರ ಶೇ. 70 ರಷ್ಟು ಮುಂಗಡ ಬರುತ್ತದೆ. ಈ ಬಗ್ಗೆ ಶಾಸಕರ ಆಪ್ತ ಸಹಾಯಕರಿಗೂ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.
ಶಾಸಕರಾದ ಜೆ.ಸಿ. ಮಾಧುಸ್ವಾಮಿ, ವೀರಭದ್ರಯ್ಯ, ನಾಗೇಶ್, ಟಿ. ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ಜಿ.ಎಚ್. ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ, ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ಕಾರ್ಯದರ್ಶಿ ಕೃಷ್ಣ ನಾಯ್ಕ ಉಪಸ್ಥಿತರಿದ್ದರು.