ಚಿತ್ರದುರ್ಗ: ಬರಸಿಡಿಲಿನಂತೆ ಬಂದಪ್ಪಳಿಸಿರುವ ಕೋವಿಡ್ 19 ವೈರಸ್ ಗೆ ಇಡೀ ಜಗತ್ತು ಬೆಚ್ಚಿ ಬಿದ್ದಿದೆ. ಬದುಕಿನ ಹಳಿ ತಪ್ಪುತ್ತಿರುವುದರಿಂದ ಜನ ಕೂಡಾ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ, ಈ ನಡುವೆ ಕೆಲ ಅಚ್ಚರಿ ಎಂಬಂತಹ ಸಂಗತಿಗಳು ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿಸಿದಾಗ ಕಾಣ ಸಿಗುತ್ತಿವೆ.
ನಗರ ಪ್ರದೇಶಗಳು ಕೊರೊನಾ ಮಹಾಮಾರಿ ಕಾರಣಕ್ಕೆ ಬಿಕೋ ಎನ್ನುತ್ತಿದ್ದರೆ ಗ್ರಾಮೀಣ ಪ್ರದೇಶಗಳು ಸ್ವತ್ಛಂಧವಾಗಿವೆ. ನಗರ ಪ್ರದೇಶದ ಬದುಕು ಬಹುತೇಕ ಸ್ತಬ್ಧಗೊಂಡಿದ್ದರೆ, ಹಳ್ಳಿಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರುತ್ತಿವೆ. ಈಗಾಗಲೇ ತರಕಾರಿ ಮತ್ತಿತರೆ ಬೆಳೆದಿರುವ ರೈತರು ನಿರೀಕ್ಷಿತ ಬೆಳೆ, ಮಾರುಕಟ್ಟೆ ಸಿಗುತ್ತಿಲ್ಲ ಎಂಬ ಸಂಕಟದಲ್ಲಿದ್ದಾರೆ. ಆದರೆ, ಇಷ್ಟಕ್ಕೆ ದೃತಿಗೆಡದ ರೈತರು ಮುಂದಿನ ಬೆಳೆ ಬೆಳೆಯಲು ಸಜ್ಜಾಗುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಸಾಮಾಜಿಕ ಅಂತರ ಎನ್ನುವುದಕ್ಕಿಂತ ಸಾಮಾನ್ಯ ಬದುಕಿನಂತೆಯೇ ತಮ್ಮಷ್ಟಕ್ಕೆ ತಾವು ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಭತ್ತ, ರಾಗಿ ಮತ್ತಿತರೆ ಒಕ್ಕಣೆ, ಈರುಳ್ಳಿ ಸಂಸ್ಕರಣೆ, ಗೋಧಿ ಒಕ್ಕಣೆ, ರಾಗಿ ಕೂಯ್ಲು, ಹೂ ಬಿಡಿಸುವುದು, ವಿಳ್ಯೆದೆಲೆ ಬಳ್ಳಿ ಪೋಷಣೆ ಸೇರಿ ಹಲವು ಕೆಲಸಗಳಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಗ್ರಾಮಗಳಿಗೆ ಮರಳಿದವರು ಹೊರ ಬಾರದೆ ಅಂತರ ಕಾಯ್ದುಕೊಂಡಿದ್ದಾರೆ.
ಮುಂಗಾರಿಗೆ ಕಾಲಿಟ್ಟ ರೈತ: ನಗರ ಪ್ರದೇಶಗಳಲ್ಲಿ ಮನೆ ಸೇರಿರುವ ಜನ ಮುಂದೇನು, ಎಲ್ಲಿಗೆ ಬರುತ್ತೆ ಕೊರೊನಾ, ಯಾವಾಗ ಮುಗಿಯುತ್ತೆ ಲಾಕ್ ಡೌನ್, ನನ್ನ ಕೆಲಸ ಉಳಿಯುತ್ತಾ, ನನ್ನ ಸಂಬಳ ಬರುತ್ತಾ ಎಂಬ ನೂರಾರು ಚಿಂತೆಯಲ್ಲಿದ್ದಾರೆ. ಆದರೆ, ಹಳ್ಳಿಗಳಲ್ಲಿ ರೈತರು ಬೆಳಗ್ಗೆಯೇ ಮುದ್ದೆ ಮುರಿದು, ಮಧ್ಯಾಹ್ನಕ್ಕೂ ಒಂದಿಷ್ಟು ಕಟ್ಟಿಕೊಂಡು ಎತ್ತು, ಗಾಡಿಗಳ ಜತೆಗೆ ಜಮೀನು ಸೇರುತ್ತಿದ್ದಾರೆ. ಯುಗಾದಿ ನಂತರ ಹೊನ್ನಾರು ಪೂಜೆ ಮಾಡಿ, ಮುಂಗಾರಿಗೆ ಅಣಿಯಾಗುತ್ತಿದ್ದಾರೆ.
ಈಗಾಗಲೇ ಬಹುತೇಕ ಜಮೀನು ಹದಗೊಂಡಿದ್ದು ಇನ್ನೊಂದು ಮಳೆ ನಂತರ ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತವೆ. ಕುಸಿದ ಬೆಲೆ ನಡುವೆಯೂ ಮೆಕ್ಕೆಜೋಳ ಮಾರಾಟ: ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಯುವ ರೈತರು ಸಾಮಾನ್ಯವಾಗಿ ಯುಗಾದಿ ಮುಗಿಯುವವರೆಗೆ ಮಾರುಕಟ್ಟೆಗೆ ತರದೆ ಹಾಗೇ ಇಟ್ಟಿರುತ್ತಾರೆ. ಯುಗಾದಿ ನಂತರ ಬೆಲೆ ಹೆಚ್ಚಾಗುತ್ತದೆ ಎನ್ನುವುದು ರೈತರ ಲೆಕ್ಕಾಚಾರ. ಆದರೆ, ಈ ವರ್ಷ ರೈತರ ಲೆಕ್ಕಾಚಾರ ತಲೆಕೆಳಗಾಗಿದೆ. ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳಕ್ಕೆ ಬೆಲೆ ಸಿಗುತ್ತಿಲ್ಲ. ಆದರೂ, ಕೊರೊನಾ ಆತಂಕದಿಂದ ಎಲ್ಲವೂ ಬಂದ್ ಆಗುತ್ತಿರುವುದರಿಂದ ರೈತರು ಮುಂದೇನು ಎಂಬ ಆತಂಕದ ಕಾರಣಕ್ಕೆ ಸಿಕ್ಕಿದ ಬೆಲೆಗೆ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದಾರೆ.
ಈರುಳ್ಳಿ ಕುಯ್ಲಿಗೆ ಒತ್ತು: ಹಿಂಗಾರು ಹಂಗಾಮಿನಲ್ಲಿ ಬೆಳೆದ ಈರುಳ್ಳಿ ಬೆಳೆ ಕೂಯ್ಲಿಗೆ ಬಂದಿದೆ. ಈರುಳ್ಳಿಯನ್ನು ಕಿತ್ತು ಸಂಸ್ಕರಣೆ ಮತ್ತು ಮಾರಾಟಕ್ಕೆ ಇದು ಸಕಾಲ. ಆಗಾಗ ಮಳೆ ಬೀಳುತ್ತಿರುವುದರಿಂದ ಗೆಡ್ಡೆ ಹಾಳಾಗುವ ಆತಂಕವೂ ಕಾಡುತ್ತಿದೆ. ಹೀಗಾಗಿ, ರೈತರು ಈರುಳ್ಳಿ ಕೂಯ್ಲಿಗೆ ಒತ್ತು ನೀಡಿದ್ದಾರೆ. ಮುಂಗಾರು ಹಂಗಾಮಿನ ಕೊನೆಗೆ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದರಿಂದ ಬಿತ್ತನೆ ಹೆಚ್ಚಾಗಿತ್ತು. ಆದರೆ, ಈಗ ಬೆಲೆ ಕುಸಿತವಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿಲ್ಲ. ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ. ಎಲ್ಲವೂ ಸಹಜವಾಗಿಯೇ ನಡೆಯುತ್ತಿವೆ. ಆಗಾಗ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಗುಂಪು ಸೇರದಂತೆ ಎಚ್ಚರಿಸಿ ಹೋಗುತ್ತಿದ್ದಾರೆ.
ಬಸವರಾಜಪ್ಪ ಸಜ್ಜನ,
ಜೆ.ಎನ್. ಕೋಟೆ ರೈತ ತಿಪ್ಪೇಸ್ವಾಮಿ ನಾಕೀಕೆರೆ