ಚಿತ್ರದುರ್ಗ: ಬುಧವಾರ ನಸುಕಿನ ವೇಳೆ ಚಲಿಸುತ್ತಿದ್ದ ಖಾಸಗಿ ಬಸ್ ಅಗ್ನಿಗಾಹುತಿಯಾಗಿದ್ದು, ಮಗು ಸೇರಿದಂತೆ ಐದು ಜನ ಸಜೀವ ದಹನವಾಗಿದ್ದಾರೆ. 30 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿಜಯಪುರದಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಬಸ್ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಸ್ತೂರಿ ರಂಗಪ್ಪನಹಳ್ಳಿ ಬಳಿ ಬೆಂಕಿ ಹೊತ್ತಿಕೊಂಡು ದಹದಹಿಸಿದೆ.
ಮೃತರನ್ನು ವಿಜಯಪುರ ಮೂಲದ ಇಬ್ಬರು ಮಹಿಳೆಯರು ಮೂವರು ಮಕ್ಕಳು ಬಸ್ ಅಗ್ನಿ ದುರಂತದಲ್ಲಿ ಸಜೀವ ದಹನವಾಗಿದ್ದಾರೆ.
ಮೃತರನ್ನು ವಿಜಯಪುರ ಮೂಲದ ಶಿಲಾ (33) ಸ್ಪರ್ಷಾ (8) ಸಮೃದ್ಧ (5) ಕವಿತಾ (29) ನಿಶ್ಚಿತಾ (3) ಎಂದು ಗುರುತಿಸಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮಾಹಿತಿ ನೀಡಿದ್ದಾರೆ.
ಕೆಎ 51 ಎಡಿ 7449 ಸಂಖ್ಯೆಯ ಕುಕ್ಕೆಶ್ರೀ ಹೆಸರಿನ ಸ್ಲೀಪರ್ ಕೋಚ್ ಬೆಂಕಿಗಾಹುತಿಯಾರುವ ಬಸ್. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಬಸ್ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದಾರೆ. ಬಸ್ಸಿನ ಗಾಜು ಹೊಡೆದು ಹಲವು ಪ್ರಯಾಣಿಕರು ಹೊರಗೆ ಬಂದಿದ್ದಾರೆ.
ಬೆಂಕಿಗೆ ಬಸ್ ಆಹುತಿಯಾದ ತಕ್ಷಣ ಕೂಗಾಟ, ಚೀರಾಟ ಕೇಳಿದ ಸ್ಥಳೀಯರು ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಇದೇ ಹೊತ್ತಿಗೆ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.