ಚಿತ್ರದುರ್ಗ: ಸತತ ಬರದಿಂದ ಕಂಗೆಟ್ಟ ಜನ ಮಳೆಗಾಗಿ ಕಪ್ಪೆ, ಕತ್ತೆ ಮದುವೆ ಮಾಡಲು ಮುಂದಾಗಿದ್ದಾರೆ. ವರುಣ ಕೃಪೆಗೆ ಪ್ರಾರ್ಥಿಸಿ ಬುಧವಾರ ನಗರದ ಕೆಳಗೋಟೆಯ ಬೇಡರ ಕಣ್ಣಪ್ಪ ದೇವಸ್ಥಾನ ಸಮೀಪದ ಮಾರಮ್ಮ ದೇವಸ್ಥಾನದಲ್ಲಿ ಕಪ್ಪೆ ಮದುವೆ ಮಾಡಲಾಯಿತು.
ಬೇಡರ ಕಣ್ಣಪ್ಪ ಮತ್ತು ಮಾರಮ್ಮ ದೇವಸ್ಥಾನ ಬೀದಿಯ ನಿವಾಸಿಗಳು ಶಾಮಿಯಾನ, ಕುರ್ಚಿ, ಟೇಬಲ್ ಹಾಕಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೆ ತರಹೇವಾರಿ ಭೋಜನವನ್ನೂ ಸಿದ್ಧಪಡಿಸಿದ್ದರು. ಹೆಣ್ಣು ಮತ್ತು ಗಂಡಿನ ಕಡೆಯವರೆಂದು ಎರಡು ಭಾಗ ಮಾಡಿಕೊಂಡು ಶಾಸ್ತ್ರಬದ್ಧವಾಗಿ ಮದುವೆ ಕಾರ್ಯ ನೆರವೇರಿಸಿದರು.
ಕಪ್ಪೆಗಳ ಮದುವೆಗಾಗಿ ಜ್ಯೋತಿಷಿಗಳ ಬಳಿ ಹೋಗಿ ಮೇ 15 ರ ಶುಭದಿನದ ಮುಹೂರ್ತವನ್ನು ನಗದಿಮಾಡಿಕೊಂಡು ಬರಲಾಗಿತ್ತು. ಮದುವೆ ಕಾರ್ಯಗಳನ್ನು ಸಂಭ್ರಮದಿಂದ ನೆರವೇರಿಸಿದರು. ಕೆಲವರು ಹೆಣ್ಣು ಕಪ್ಪೆಯ ಬೀಗರಾದರೆ, ಇನ್ನುಳಿದವರು ಗಂಡು ಕಪ್ಪೆಯ ಬೀಗರಾಗಿದ್ದರು.
ಹಾಲಗಂಬ ಮತ್ತು ಹಂದರಗಂಬ ತರುವುದು, ಅರಿಷಣ-ಕುಂಕುಮ ಹಚ್ಚುವುದು, ಸುರುಗಿ ಸುತ್ತುವುದು, ಮೆರವಣಿಗೆ ಮೂಲಕ ಬಾಸಿಂಗ ತರುವುದು ಸೇರಿದಂತೆ ತಾಳಿ ಕಟ್ಟುವವರೆಗೆ ಮದುವೆ ಮನೆಯಲ್ಲಿ ಏನೇನು ಶಾಸ್ತ್ರಗಳು ನಡೆಯುತ್ತವೆಯೋ ಆ ಎಲ್ಲ ಕಾರ್ಯಗಳೂ ಸಂಪ್ರದಾಯ ಬದ್ಧವಾಗಿಯೇ ನಡೆದವು.
ಹೆಣ್ಣು ಹಾಗೂ ಗಂಡು ಕಪ್ಪೆಗಳನ್ನು ತಂದು ಸಂಭ್ರಮದಿಂದ ಮದುವೆ ಮಾಡಲಾಯಿತು. ಲಗ್ನ ಮಾಡಿಸಿದ ನಂತರ 12 ವರ್ಷದೊಳಗಿನ ಹುಡುಗನೊಬ್ಬ ಕಪ್ಪೆ ಜೋಡಿಯನ್ನು ತಲೆ ಮೇಲೆ ಕೂರಿಸಿಕೊಂಡು ಐದು ಮನೆಗಳಿಗೆ ಮೆರವಣಿಗೆ ಮಾಡಿದ. ಈ ಸಂದರ್ಭದಲ್ಲಿ ಮುತ್ತೈದೆಯರು ಕಪ್ಪೆ ದಂಪತಿಗೆ ಹರಸಿದರು. ಮದುವೆಯಲ್ಲಿ ಪಾಲ್ಗೊಂಡಿದ್ದವರು ಶೀಘ್ರ ಮಳೆಯಾಗಿ ಇಳೆ ತಂಪಾಗಲಿ, ರೈತರು ಬಿತ್ತನೆ ಮಾಡಿ ದೇಶಕ್ಕೆ ಅನ್ನ ನೀಡಲಿ, ಬಡವರಿಗೆ ಉದ್ಯೋಗ ಸಿಗಲಿ ಎಂದು ಪ್ರಾರ್ಥಿಸಿದರು.
ಮದುವೆಯ ಪೌರೋಹಿತ್ಯವನ್ನು ಮಾರಮ್ಮ ದೇವಸ್ಥಾನ ಪೂಜಾರಿ ಮಾರಣ್ಣ ವಹಿಸಿಕೊಂಡಿದ್ದರು. ಮದುವೆಗೆ ಬಂದ ಎಲ್ಲರಿಗೂ ಅನ್ನ, ಪಾಯಸ, ಸಾಂಬಾರ್, ಪಲ್ಯ ಸೇರಿದಂತೆ ಭೂರಿ ಭೋಜನ ಬಡಿಸಲಾಯಿತು. ಬೇಡರ ಕಣ್ಣಪ್ಪ ದೇವಸ್ಥಾನ ಬೀದಿಯ ಓಬಮ್ಮ, ಮಾರಕ್ಕ, ರತ್ನಮ್ಮ, ಲಕ್ಷ್ಮೀದೇವಮ್ಮ, ಪಾಲಮ್ಮ, ಮಾರಪ್ಪ, ಮಂಜಣ್ಣ, ಕುಮಾರ, ಓಬಣ್ಣ ಮೊದಲಾದವರು ಪಾಲ್ಗೊಂಡಿದ್ದರು.