ಚಿತ್ರದುರ್ಗ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಅರಣ್ಯ ಹಕ್ಕು ಸಮಿತಿಗಳ ಜಿಲ್ಲಾ ಒಕ್ಕೂಟ, ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ, ಕರ್ನಾಟಕ ಆದಿವಾಸಿ ಒಕ್ಕೂಟದ ವತಿಯಿಂದ ಭೂಮಿ ಹಕ್ಕಿಗಾಗಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಗುರುವಾರ 11 ದಿನ ಪೂರೈಸಿತು.
ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಕಡಬನಕಟ್ಟೆಯ ನರಹರಿ ಸಾಂಸ್ಕೃತಿಕ ಅಭಿವೃದ್ಧಿ ಭಜನಾ ಮಂಡಳಿ ಕಲಾವಿದರು ಸುಮಾರು ಮೂರು ಗಂಟೆಗಳ ಕಾಲ ಭಜನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಕೆ. ಲೋಕೇಶ್ ಮತ್ತು ಸಂಗಡಿಗರು ಭಜನೆ ಮಾಡುವ ಮೂಲಕ ಭೂಮಿ ವಸತಿ ಹಕ್ಕು ವಂಚಿತರಿಗೆ ಸಾಗುವಳಿ ಹಕ್ಕುಪತ್ರಗಳನ್ನು ನೀಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯ ಪ್ರಜಾಶಕ್ತಿ ಬೋರಯ್ಯ ಮಾತನಾಡಿ, ಕಳೆದ ವರ್ಷ ಇದೇ ಜಾಗದಲ್ಲಿ 23 ದಿನ ಚಳವಳಿ ನಡೆಸಲಾಗಿತ್ತು. ಈಗ ಮತ್ತೆ ಹೋರಾಟ ಆರಂಭಿಸಿದ್ದು ಇಂದಿಗೆ 11 ದಿನಗಳು ಕಳೆದಿದೆ. ಜಿಲ್ಲೆಯ ಆರು ತಾಲೂಕುಗಳಲ್ಲಿ 27 ದಿನಗಳ ಕಾಲ 408 ಗ್ರಾಮಗಳಲ್ಲಿ ಜಾಗೃತಿ ಜಾಥಾ ಮಾಡಿದ್ದೇವೆ. ಆದರೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಗಳು ಇಂದಿಗೂ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಜಿಲ್ಲಾಡಳಿತ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಐದು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸಾಗುವಳಿ ಚೀಟಿ ಸಂಬಂಧ ಸಭೆ ನಡೆಸಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯ ಆರು ತಾಲೂಕುಗಳಲ್ಲಿ 1990-91, 1998-99ನೇ ಸಾಲಿನಲ್ಲಿ 1,12, 964 ಅರ್ಜಿಗಳನ್ನು ಬಗರ್‌ಹುಕುಂ ಸಮಿತಿಗೆ ಸಲ್ಲಿಸಲಾಗಿದೆ. ಎಲ್ಲ ಅರ್ಹತೆ ಇರುವ 53,322 ಅರ್ಜಿಗಳನ್ನು ಪರಿಶೀಲನೆ ಮಾಡದೆ 28 ವರ್ಷಗಳಿಂದ ಸರ್ಕಾರ ಬಾಕಿ ಉಳಿಸಿಕೊಂಡಿದೆ. ತುರ್ತು ಕ್ರಮ ಜರುಗಿಸಿ ಸಾಗುವಳಿ ಚೀಟಿ ವಿತರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ 5573 ಅರ್ಜಿಗಳನ್ನು ಸಲ್ಲಿಸಿದ್ದು, ಕೇವಲ 347 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಬಾಕಿ ಉಳಿಸಿಕೊಂಡಿರುವ 5526 ಅರ್ಜಿಗಳ ಪರಿಶೀಲನೆ ಪೂರ್ಣಗೊಳಿಸಿ ಹಕ್ಕುಪತ್ರ ನೀಡಬೇಕು ಎಂದರು.
ಸಾಗುವಳಿ ಚೀಟಿ ನೀಡೋವರೆಗೂ ಹೋರಾಟ
ಭೂರಹಿತ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡುವ ತನಕ ಹೋರಾಟವನ್ನು ಹಿಂಪಡೆಯುವುದಿಲ್ಲ. ಕಳೆದ ಮೂರ್‍ನಾಲ್ಕು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಭೂರಹಿತ ಬಡ ಕುಟುಂಬಗಳಿಗೆ ಹಾಗೂ ಅರಣ್ಯ ಹಕ್ಕು ವಾಸಿಗಳಿಗೆ ಕೂಡಲೇ ಸರ್ಕಾರ ಸಾಗುವಳಿ ಚೀಟಿ ವಿತರಿಸುವ ಮೂಲಕ ಭೂಒಡೆತನ ನೀಡಬೇಕು. ಸರ್ಕಾರ ನಮಗೆ ಲಿಖೀತವಾಗಿ ಉತ್ತರ ನೀಡುವ ತನಕ ಧರಣಿ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯ ಪ್ರಜಾಶಕ್ತಿ ಬೋರಯ್ಯ ಎಚ್ಚರಿಸಿದರು.