Advertisement

ಚಿಟ್ಪಾಡಿ ಪರಿಸರದಲ್ಲಿ ವಾರ ಕಳೆದರೂ ನೀರು ಬಂದಿಲ್ಲ

09:40 PM Apr 30, 2019 | Sriram |

ಉಡುಪಿ: “ಬಜೆಯಲ್ಲಿ ನೀರು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮೊನ್ನೆ ಎಲೆಕ್ಷನ್‌ ದಿನದ ರಾತ್ರಿವರೆಗೆ ನೀರು ಸರಿಯಾಗಿತ್ತು. ಅನಂತರ ನೀರು ಬರುತ್ತಿಲ್ಲ. ನೀರು ಬಾರದೆ ವಾರ ಮೇಲಾಯಿತು’.

Advertisement

ಇದು ಚಿಟ್ಪಾಡಿ ವಾರ್ಡ್‌ನ ಹಲವೆಡೆ ಕೇಳಿಬಂದ “ನೀರು ದೂರು’. ಇದೇ ವಾರ್ಡ್‌ನ ಭಾಗ್ಯಮಂದಿರ ಪರಿಸರದ ಕೆಲವೆಡೆ ಮೂರು ದಿನಕ್ಕೊಮ್ಮೆ ನೀರು ಬರುತ್ತಿದೆ. ಆದರೆ ಒತ್ತಡವಿಲ್ಲದೆ ಎತ್ತರದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. “ಎಲೆಕ್ಷನ್‌ ನಡೆದ ದಿನದ ಅನಂತರ ಸರಿಯಾಗಿ ನೀರು ಬರುತ್ತಿಲ್ಲ. ಇಲ್ಲಿ ತಗ್ಗು ಪ್ರದೇಶದವರು ನೆಲದಡಿ ಮಾಡಿರುವ ಸಂಪ್‌(ಟ್ಯಾಂಕ್‌) ತುಂಬಿ ಅನಂತರ ಮೇಲೆ ಬರಬೇಕು.

ಹಾಗಾಗಿ ನಮಗೆ ತೊಂದರೆಯಾಗುತ್ತಿದೆ. ಇದು ಕಲ್ಲು ಇರುವ ಪ್ರದೇಶ. ಇಲ್ಲಿ ಒಂದು ಬಾವಿ ಇದೆ. ಅದರಲ್ಲಿಯೂ ಕಲ್ಲು ಬಂತು. ಹಾಗಾಗಿ ಅದು ಪಾಳುಬಿದ್ದಿದೆ’ ಎಂದರು ಸ್ಥಳೀಯ ನಿವಾಸಿ ಗಣೇಶ್‌.

ಇದೇ ಪರಿಸರದಲ್ಲಿರುವ ಗಿರಿಜಾ ಅವರು ಕೂಡ ಕಳೆದ ಕೆಲವು ದಿನಗಳಿಂದ ನೀರು ಸರಿಯಾಗಿ ಬರುತ್ತಿಲ್ಲ ಎಂದು ಅಹವಾಲು ತೋಡಿಕೊಂಡರು. “ಇದುವರೆಗೆ ನಮ್ಮ ಕಡೆಗೆ ಟ್ಯಾಂಕರ್‌ ನೀರು ಬಂದಿಲ್ಲ. ಮುಂದೇನು ಗೊತ್ತಿಲ್ಲ’ ಎಂದು ಈ ಪರಿಸರದ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ವಿಶೇಷ ವೆಂದರೆ ಎರಡು ಪ್ರಮುಖ ರಾಜಕೀಯ ಪಕ್ಷಗಳಿಗೆ ಸೇರಿದ ಅಕ್ಕಪಕ್ಕದ ವಾರ್ಡ್‌ಗಳ ಸದಸ್ಯರದ್ದು ಕೂಡ ಏಕಭಿಪ್ರಾಯ-“ಎಲೆಕ್ಷನ್‌ ಮುಗಿದ ಅನಂತರ ನೀರು ಸರಿಯಾಗಿ ಬರುತ್ತಿಲ್ಲ’ !

ಟ್ಯಾಂಕರ್‌ಗಳಿವೆ ನೀರಿಲ್ಲ
ನಗರಕ್ಕೆ ನೀರು ಪೂರೈಸಲು ಟ್ಯಾಂಕರ್‌ ಒದಗಿಸಲು ಹಲವರು ಮುಂದೆ ಬರುತ್ತಿದ್ದಾರೆ. ಆದರೆ ನಗರದ ಆಸುಪಾಸು ಎಲ್ಲಿಯೂ ನೀರಿಲ್ಲ. ನಾವು ಇಂದ್ರಾಳಿಯ ಒಂದು ಬಾವಿಯಿಂದ ತರುತ್ತಿದ್ದೇವೆ. ಆದರೆ ಅಲ್ಲಿ ಬೇರೆ ಟ್ಯಾಂಕರ್‌ನವರು ಕೂಡ ಬರುತ್ತಾರೆ. ಕನಿಷ್ಠ ಎರಡು ತಾಸು ಕಾದು ನೀರು ತುಂಬಿಸಿಕೊಂಡು ಬರುತ್ತೇವೆ. ಅದು ಕೂಡ ಎಷ್ಟು ಸಮಯ ಸಿಗುತ್ತದೆಯೋ ಗೊತ್ತಿಲ್ಲ ಎನ್ನುತ್ತಾರೆ ಟ್ಯಾಂಕರ್‌ ಚಾಲಕ ಶಿವರುದ್ರಪ್ಪ.

Advertisement

ಯಥೇತ್ಛ ನೀರಿದ್ದರೂ ನಿರ್ಲಕ್ಷ್ಯಕ್ಕೊಳಗಾದ ಬಾವಿ
ಚಿಟ್ಪಾಡಿ ವಾರ್ಡ್‌ನ ಪದ್ಮನಾಭ ನಗರದ ಗದ್ದೆ ಸಾಲಿನಲ್ಲಿ ನಗರಸಭೆಗೆ ಸಂಬಂಧಿಸಿದ ಒಂದು ಬೃಹತ್‌ ಬಾವಿ ಇದೆ. ಕಳೆದ ಹತ್ತಾರು ವರ್ಷಗಳಿಂದ ಇದರಿಂದ ಶುದ್ಧ ನೀರು ಯಥೇತ್ಛವಾಗಿ ದೊರೆಯುತ್ತಿತ್ತು. ಸುಮಾರು 20 ಅಡಿ ಸುತ್ತಳತೆಯ ಈ ಬಾವಿಯಲ್ಲಿ ಈಗಲೂ ಯಥೇತ್ಛವೆನಿಸುವಷ್ಟು ನೀರಿದೆ. ಆದರೆ ಎರಡು ವರ್ಷಗಳಿಂದ ಇಲ್ಲಿ ಬಾವಿ ಇದೆಯೆಂಬುದೇ ಗೊತ್ತಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಹುಲ್ಲು, ಕುರುಚಲು ಗಿಡಗಳು ಇದರ ಸುತ್ತ ಬೆಳೆದಿವೆ. ಇದನ್ನು ತೆರವುಗೊಳಿಸಿದರೆ ಈ ಬಾವಿಯಿಂದ ಬೇಕಾದಷ್ಟು ನೀರು ಪಡೆಯಬಹುದಾಗಿದೆ. ಆದರೆ ನಗರಸಭೆ, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ.

ಈ ಭಾಗಕ್ಕೆ ನೀರು ಪೂರೈಕೆ ಸರಿಯಾಗಿ ಆಗಿಯೇ ಇಲ್ಲ. ವಾರ ಕಳೆದರೂ ನಗರಸಭೆಯ ಯಾರೂ ಪೂರೈಕೆಗೆ ಸ್ಪಂದಿಸುತ್ತಿಲ್ಲ. ಇದರಿಂದ ದಿನವಿಡೀ ನೀರು ಸಂಗ್ರಹಣೆ ಬಗ್ಗೆಯೇ ಜನ ಚಿಂತಿಸುವಂತಾಗಿದೆ.

ವಾರ್ಡಿನವರ ಬೇಡಿಕೆ
– ಇರುವ ಬಾವಿಗಳನ್ನು ದುರಸ್ತಿಗೊಳಿಸಬೇಕು.
– ಟ್ಯಾಂಕರ್‌ ನೀರು ಒದಗಿಸಬೇಕು.
– ಪ್ರಶರ್‌ನಲ್ಲಿ ಒಂದೊಂದೇ ಏರಿಯಾಕ್ಕೆ ನೀರು ಕೊಡುತ್ತಾ ಬರಬೇಕು.
– ನೀರಿಗಾಗಿ ಕರೆ ಮಾಡುವಾಗ ಅಧಿಕಾರಿಗಳು ಕರೆ ಸ್ವೀಕರಿಸಿ ಸ್ಪಂದಿಸಬೇಕು.
– ಬಾವಿಗಳು ಹಾಳಾಗದಂತೆ ನೋಡಿಕೊಳ್ಳಬೇಕು.

ನಗರಸಭೆಯಿಂದ ಸ್ಪಂದನೆ ಇಲ್ಲ
ಕೊಡಪಾನ ಹಿಡಿದುಕೊಂಡು ನಿಮ್ಮ ಮನೆಗೆ ಬರುತ್ತೇವೆ ಎಂದು ಜನರು ಎಚ್ಚರಿಕೆ ನೀಡುತ್ತಿದ್ದಾರೆ. ಅವರಿಗೆ ನೀರು ಕೊಡುವುದು ನಮ್ಮ ಜವಾಬ್ದಾರಿ. ನಾನು ದಿನ ಬೆಳಗ್ಗೆ ಎದ್ದು ನಗರಸಭೆಯ ಅಧಿಕಾರಿಗಳಿಗೆ ಫೋನ್‌ ಮಾಡುತ್ತಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಇರುವ ಒಂದು ದೊಡ್ಡ ಬಾವಿಯನ್ನು ಕೂಡ ದುರಸ್ತಿ ಮಾಡಿಲ್ಲ. ಕೆಲವೆಡೆ ಬಾವಿಗಳಿದ್ದರೂ ನೀರಿಲ್ಲ. ರವಿವಾರ ಒಂದೇ ದಿನ 12,000 ಲೀಟರ್‌ನ 4 ಟ್ಯಾಂಕರ್‌ಗಳಲ್ಲಿ ವಿಜಯವೀರ ಸಂಘದವರ ಸಹಕಾರದೊಂದಿಗೆ ವಿತರಿಸಿದ್ದೇನೆ. ವಾರ್ಡ್‌ನ ಹೆಚ್ಚಿನ ಕಡೆಗಳಲ್ಲಿ ನೀರು ಬಾರದೆ 6 ದಿನಗಳಾದವು. ಇಂದಿರಾನಗರಕ್ಕೆ ನೀರು ಪೂರೈಕೆಯಾಗುವಲ್ಲಿ ಗೇಟ್‌ವಾಲ್‌ ಹಾಕದೇ ಸಮಸ್ಯೆ ಹೆಚ್ಚಾಗಿದೆ.
 -ಶ್ರೀಕೃಷ್ಣ ರಾವ್‌ ಕೊಡಂಚ,
ಸದಸ್ಯರು, ಚಿಟ್ಪಾಡಿ ವಾರ್ಡ್‌

ಸಮಸ್ಯೆ ಗಮನಕ್ಕೆ ಬಂದಿದೆ
ಒಂದು ವಾರದಿಂದ ನೀರು ಇರಲಿಲ್ಲ. ರವಿವಾರ ಟ್ಯಾಂಕರ್‌ನಲ್ಲಿ ಬಂತು. ನಮ್ಮ ಮನೆ ಪಕ್ಕದಲ್ಲಿರುವ ವಿಜಯವೀರ ಸಂಘದವರಿಗೆ ನೀರಿನ ಸಮಸ್ಯೆ ತಿಳಿಸಿದೆ. ಅವರು ನಗರಸಭೆ ಸದಸ್ಯರಿಗೆ ತಿಳಿಸಿದರು. ಈಗ ನೀರು ಕೊಡುತ್ತಿದ್ದಾರೆ. ಇನ್ನು ಇದು ಖಾಲಿಯಾದರೆ ಯಾವಾಗ ಸಿಗುತ್ತದೆ ಎಂದು ಗೊತ್ತಿಲ್ಲ. ನಮ್ಮದು ಸ್ವಲ್ಪ ಎತ್ತರದ ಪ್ರದೇಶವಾಗಿದೆ. ನೀರಿನ ಸಮಸ್ಯೆ ಹೆಚ್ಚು.
-ಮುಮ್ತಾಜ್‌,
ಶ್ರೀನಿವಾಸ ನಗರ ನಿವಾಸಿ

ಉದಯವಾಣಿ ಆಗ್ರಹ
ಚಿಟ್ಪಾಡಿ ವಾರ್ಡ್‌ನಲ್ಲಿ ರುವ ಒಂದು ದೊಡ್ಡ ಸರಕಾರಿ ಬಾವಿಯನ್ನು ಬಳಸಿಕೊಳ್ಳಬೇಕು. ಎತ್ತರದ ಪ್ರದೇಶಗಳಿಗೆ ಟ್ಯಾಂಕರ್‌ ನೀರು ಒದಗಿಸಬೇಕು. 3 ದಿನಕ್ಕೊಮ್ಮೆಯಾದರೂ ಎಲ್ಲೆಡೆ ನೀರು ಪೂರೈಕೆ ಮಾಡಬೇಕು. ಗೇಟ್‌ವಾಲ್‌ ಮತ್ತಿತರರು ಪೈಪ್‌ ಲೈನ್‌ ಸಮಸ್ಯೆ ಪರಿಹರಿಸಬೇಕು.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next