ಚಿತ್ರದುರ್ಗ: ಕೋವಿಡ್ ಮೊದಲ ಹಂತಕ್ಕಿಂತಲೂ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಸೂಚನೆ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಅ ಧಿಕಾರಿಗಳ ಸಭೆ ನಡೆಸಿದ ಅವರು, ಕೊರೊನಾ ಬರುವ ಮೊದಲು ತಡೆಗಟ್ಟುವುದು ಸರ್ಕಾರದ ಗುರಿಯಾಗಿದೆ. ಅದಕ್ಕಾಗಿಯೇ ಮೇ 4ರವರೆಗೆ ನೀಡಿರುವ ಎಲ್ಲಾ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದರು. ಸಾರ್ವಜನಿಕರು ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ಲಕ್ಷಣ ತಿಳಿದಿ ತಕ್ಷಣ ಆಸ್ಪತ್ರೆಗೆ ಧಾವಿಸಿದರೆ ಇತರರಿಗೆ ಹರಡುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸಬೇಕು. ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಪರೀಕ್ಷೆ ಈಗ 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತಿದ್ದು, 6 ಗಂಟೆಯಲ್ಲಿ ಫಲಿತಾಂಶ ನೀಡಲು ಡಿಎಚ್‌ಒ ಅಗತ್ಯ ಕ್ರಮ ಕೈಗೊಂಡು ಲ್ಯಾಬ್ ಮೇಲ್ದರ್ಜೆಗೇರಿಸಿಕೊಳ್ಳಬೇಕು ಎಂದು ಸೂಚಿಸಿದರು.
ಯಾರಿಗೆ ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತದೆಯೋ ಎಲ್ಲರೂ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಸ್ವಾಬ್ ನೀಡಿ ಬೇಗ ಫಲಿತಾಂಶ ಪಡೆಯುವಂತಾಗಬೇಕು. ಬೇಗ ಪರೀಕ್ಷೆ ಮಾಡುವುದರಿಂದ ಬೇರೆಯವರಿಗೆ ಹರಡುವುದನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಬೇಕೆಂದರು. ಕೋವಿಡ್‌ಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ 785 ಹಾಸಿಗೆ ಕಾಯ್ದಿರಿಸಲಾಗಿದ್ದು ಇದರಲ್ಲಿ ಆಕ್ಸಿಜನ್ ನೆಟೆಡ್ ಬೆಡ್ ಗಳು 540, ಐಸಿಯು 41, ವೆಂಟಿಲೇಟರ್ 57 ಇವೆ. ಖಾಸಗಿಯಲ್ಲಿ 375 ಬೆಡ್ ಮೀಸಲಿರಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 610 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು 72 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದವರು ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಫಾಲಾಕ್ಷ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಕೋವಿಡ್ ಮತ್ತಷ್ಟು ಹೆಚ್ಚಾಗುವ ಬಗ್ಗೆ ತಜ್ಞರ ವರದಿ ಹೇಳಿದೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಜ್ಜಾಗಿರಬೇಕು. ಇದಕ್ಕೆ ಬೇಕಾದ ಅನುದಾನದ ಸಮಸ್ಯೆ ಇರುವುದಿಲ್ಲ. ಈಗಾಗಲೇ 250 ಕೋಟಿ ರೂ. ಅನುದಾನವನ್ನು ವಿವಿಧ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಇದು ವಿಪತ್ತು ಎಂದು ಘೋಷಣೆ ಮಾಡಿದ್ದು ಇದರ ನಿವಾರಣೆ ಮಾತ್ರ ನಮ್ಮ ಗುರಿ. ಆದ್ದರಿಂದ ಇನ್ನೂ ಹೆಚ್ಚಿನ ಬೆಡ್ ವ್ಯವಸ್ಥೆ, ಔಷಧ, ಆಕ್ಸಿಜನ್ ದಾಸ್ತಾನು ಮಾಡಿಕೊಂಡು ಹೆಚ್ಚುವರಿಯಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲು ಕ್ರಮ ಕೈಗೊಳ್ಳುವಂತೆ ಮಂಜುನಾಥ ಪ್ರಸಾದ್ ಸೂಚಿಸಿದರು.
ಕೋವಿಡ್ ಪಾಸಿಟಿವ್ ಆಗಿ ಮನೆಯಲ್ಲಿ ಪ್ರತ್ಯೇಕವಾಗಿರಲು ವ್ಯವಸ್ಥೆ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಮನೆಯವರಿಗೆಲ್ಲ ಹರಡುತ್ತಾರೆ. ಎಲ್ಲೆಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆಯೋ ಅಂತಹ ಕಡೆ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಬೇಕು. ಕೋವಿಡ್ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಪಾಳಿಯ ಆಧಾರದ ಮೇಲೆ ಕೆಲಸ ಮಾಡಲು ಮತ್ತು ತಂಗಲು ಪ್ರತ್ಯೇಕ ವ್ಯವಸ್ಥೆಗಾಗಿ ಲಾಡ್ಜ್ಗಳನ್ನು ಬಳಕೆ ಮಾಡಿಕೊಳ್ಳಲು ಸೂಚನೆ ನೀಡಿದರು.
ಹತ್ತು ಕೆಜಿ ಅಕ್ಕಿ ವಿತರಣೆ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜೊತೆಗೆ ರಾಜ್ಯ ಸರ್ಕಾರ ಮೇ ಮತ್ತು ಜೂನ್ ತಿಂಗಳಿಗೆ ಪ್ರತಿಯೊಬ್ಬರಿಗೂ 10 ಕೆಜಿ ಆಹಾರ ಧಾನ್ಯವನ್ನು ವಿತರಣೆ ಮಾಡಲಿದ್ದು, ಇದು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಇದನ್ನು ಸಂಪೂರ್ಣವಾಗಿ ಬಯೋಮೆಟ್ರಿಕ್ ಮೂಲಕವೇ ವಿತರಣೆ ಮಾಡಲು ಆಹಾರ ಇಲಾಖೆ ಅ ಧಿಕಾರಿಗೆ ಸೂಚಿಸಿದರು. ಪೂರ್ವ ಮುಂಗಾರು ಆರಂಭವಾಗಿದ್ದು ಬಿತ್ತನೆಗೆ ಬೇಕಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಇಟ್ಟುಕೊಳ್ಳಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಹಾಗೂ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗದಂತೆ ಕ್ರಮ ಕೈಗೊಳ್ಳಲು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಜಿ. ರಾಧಿಕಾ, ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಅಪರ ಜಿಲ್ಲಾ ಧಿಕಾರಿ ಇ. ಬಾಲಕೃಷ್ಣ ಹಾಗೂ ವಿವಿಧ ಇಲಾಖೆ ಅ ಧಿಕಾರಿಗಳು ಭಾಗವಹಿಸಿದ್ದರು.