ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: “ಹಣ್ಣುಗಳ ರಾಜ’ ಮಾವಿನ ಫಸಲು ಇಳುವರಿ ಈ ವರ್ಷ ಕಡಿಮೆಯಾಗುವ ಸಾಧ್ಯತೆ ಇದ್ದು, ಅಕಾಲಿಕ ಮಳೆಯ ಹೊಡೆತಕ್ಕೆ ನೆಲ ಕಚ್ಚುವಂತಾಗಿದೆ. ರೈತನ ಬದುಕನ್ನು ಮುಂಗಾರಿನ ಜತೆಗಿನ ಜೂಜಾಟ ಎನ್ನಲಾಗುತ್ತದೆ. ಒಂದು ವರ್ಷ ಅತಿವೃಷ್ಟಿ, ಮತ್ತೂಂದು ವರ್ಷ ಅನಾವೃಷ್ಟಿ, ಗಾಳಿ, ಮಳೆ, ಆಲಿಕಲ್ಲು ಸೇರಿದಂತೆ ನಾನಾ ಕಾರಣಗಳಿಗೆ ರೈತ ಸಮಸ್ಯೆಗೆ ಸಿಲುಕುತ್ತಾನೆ.
ವಿಶೇಷವಾಗಿ ಮಾವು ಬೆಳೆ ಬಹಳ ಸೂಕ್ಷ್ಮ. ಮರ ಹೂವಾಗಿ ಈಚಾಗಿ ಕಾಯಿ ಕಟ್ಟುವ ಸಮಯ ಬಹಳ ಮುಖ್ಯವಾದುದು. ಆದರೆ ಈ ವರ್ಷದ 12 ತಿಂಗಳಲ್ಲಿ ಸರಾಸರಿ ಒಂದೆರಡು ಮಳೆ ಬಂದಿದ್ದರಿಂದ ಅಕಾಲಿಕ ಮಳೆ ಕಾರಣಕ್ಕೆ ಜಿಲ್ಲೆಯ ಶೇ. 50 ರಷ್ಟು ಬೆಳೆ ನಷ್ಟವಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಹೂವು ಕಟ್ಟುವ ಹಂತದಲ್ಲಿದ್ದ ಮಾವು ತೊಂದರೆಗೀಡಾಗಿದೆ.
ಮಳೆಗೆ ಹೂವು ಉದುರಿದ್ದು, ಮತ್ತೆ ಹೂವಾಗಿ ಕಾಯಿ ಕಟ್ಟುವುದರಲ್ಲಿ ವಿಪರೀತ ಬಿಸಿಲು ಆವರಿಸಿ ವ್ಯತಿರಿಕ್ತ ವಾತಾವರಣ ನಿರ್ಮಾಣವಾಗಿದೆ. ಇದೆಲ್ಲದರ ಪರಿಣಾಮ ಮಾರುಕಟ್ಟೆಗೆ ಮಾವು ಲಗ್ಗೆ ಇಡುವುದು ತಡವಾಗಿದೆ. ಇದರೊಟ್ಟಿಗೆ ಬೆಲೆ ಹೆಚ್ಚಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಹೊಳಲ್ಕೆರೆಯಲ್ಲಿ ಅತಿ ಹೆಚ್ಚು ಮಾವು ಬೆಳೆ: ಜಿಲ್ಲೆಯಲ್ಲಿ ಹೆಚ್ಚು ಮಾವು ಬೆಳೆಯುವ ತಾಲೂಕುಗಳ ಪೈಕಿ ಹೊಳಲ್ಕೆರೆ ಮೊದಲ ಸ್ಥಾನದಲ್ಲಿದೆ. ಇಲ್ಲಿ 1354 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದ್ದು, ಪ್ರತಿ ವರ್ಷ 12,188 ಮೆಟ್ರಿಕ್ ಟನ್ ಇಳುವರಿ ಲಭ್ಯವಾಗುತ್ತಿದೆ. ಕೆಲ ಸಂದರ್ಭದಲ್ಲಿ ಇದು ಹೆಚ್ಚು ಅಥವಾ ಕಡಿಮೆ ಆಗುವುದು ಇದೆ. ಹೊಸ ತೋಟಗಳ ಸೇರ್ಪಡೆಯಾದರೆ, ಕೆಲ ರೈತರು ರೈ ಸುಟ್ಟುಕೊಂಡು ಬೆಳೆ ಬದಲಾಯಿಸಿದ್ದೂ ಇದೆ. ಜಿಲ್ಲೆಯಲ್ಲಿ 2545 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ.
ಇದರಿಂದ ಕಳೆದ ವರ್ಷ 25,306 ಮೆಟ್ರಿಕ್ ಟನ್ ಇಳುವರಿ ಬಂದಿದೆ. ಇಡೀ ಜಿಲ್ಲೆಯ ಬೆಳೆಗೆ ಹೋಲಿಕೆ ಮಾಡಿದಾಗ ಹೊಳಲ್ಕೆರೆಯ ಪಾಲು ಅರ್ಧದಷ್ಟಿದೆ. ಹಿರಿಯೂರು ತಾಲೂಕನ್ನು “ಫ್ರೂಟ್ಸ್ ಬೌಲ್’ ಎಂದು ಕರೆದರೂ, ಅಲ್ಲಿ ಮಾವಿಗಿಂತ ಇತರೆ ಹಣ್ಣಿನ ಬೆಳೆಗಳೇ ಪ್ರಾಮುಖ್ಯ ಪಡೆದುಕೊಂಡಿವೆ. ಮಲ್ಲಿಕಾ, ಅಲಾ ನ್ಸಾ, ಬಂಗನ್‌ಪಲ್ಲಿ, ನೀಲಂ, ತೋತಾಪುರಿ, ಮಲ್ಗೊವಾ, ಕೇಸರ್, ಬೇನಿಷಾ, ರಸಪೂರಿ, ದಸೇರಿ ಮತ್ತಿತರ ತಳಿಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗಿದೆ. ಆದರೆ ಅಕಾಲಿಕ ಮಳೆ ಈ ವರ್ಷದ ಮಾವು ಬೆಳೆಗಾರರ ಕನಸಿಗೆ ಕೊಳ್ಳಿ ಇಟ್ಟಿದ್ದು ಸುಳ್ಳಲ್ಲ.