ಚಳ್ಳಕೆರೆ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು.
ರಾಜ್ಯ ರೈತ ಸಂಘದ ಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ರೈತರು, ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಮಾಜಸೇವಕರು ರಸ್ತೆ ತಡೆಯಲ್ಲಿ ಭಾಗವಹಿಸಿದ್ದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತ ಸಮುದಾಯಕ್ಕೆ ಮಾರಕವಾಗುವಂತಹ ಕಾಯ್ದೆಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಧೋರಣೆ ಖಂಡನೀಯ. ರೈತರಿಗೆ ಹೆಚ್ಚು ಉಪಯುಕ್ತವಾಗುತ್ತದೆ ಎಂಬ ಉದ್ದೇಶದಿಂದ ನೂತನ ಕೃಷಿ ಕಾಯ್ದೆಯನ್ನು ಜಾರಿಗೆ ತಂದಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲಿಂದ ಮೇಲೆ ಸ್ಪಷ್ಟೀಕರಣ ನೀಡುತ್ತಿದ್ದಾರೆ.
ನೂತನ ಕೃಷಿ ಕಾಯ್ದೆ ಜಾರಿ ವಿಚಾರದಲ್ಲಿ ಯಾವ ರೈತ ಸಂಘಟನೆಯೊಂದಿಗೂ ಚರ್ಚೆ ನಡೆಸಿಲ್ಲ. ಪ್ರಾರಂಭದಲ್ಲೇ ರೈತರಿಗೆ ಮಾಹಿತಿ ನೀಡಿದ್ದರೆ ಕಾಯ್ದೆಗೆ ತಡೆಯೊಡ್ಡಿ ಬೇರೆ ಮಾರ್ಗದಲ್ಲಿ ರೈತರಿಗೆ ಸಹಾಯ ಮಾಡುವಂತೆ ಸಲಹೆ ನೀಡುತ್ತಿದ್ದೆವು. ಆದರೆ ರೈತರ ಹಿತವನ್ನು ಕಡೆಗಣಿಸಿ ಕೇಂದ್ರ ಸರ್ಕಾರ ಏಕಪಕ್ಷಿಯವಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿರುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಅನ್ವರ್ ಮಾಸ್ಟರ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್. ಚನ್ನಕೇಶವ ಮೂರ್ತಿ, ಸಮಾಜಸೇವಕ ಎಚ್.ಎಸ್. ಸಯ್ಯದ್, ಸಿಐಟಿಯು ಕಾರ್ಯದರ್ಶಿ ಟಿ. ತಿಪ್ಪೇಸ್ವಾಮಿ ಮುಂತಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಶ್ರೀಕಂಠಮೂರ್ತಿ, ತಳಕು ನಾಗರಾಜು, ಪರಸಪ್ಪ ಮತ್ತಿತರರಿದ್ದರು. ರಸ್ತೆ ತಡೆ ನಡೆಸಿದವರನ್ನು ಪೊಲೀಸ್ ಇನ್ಸ್ ಪೆಕ್ಟರ್ ಜೆ.ಸಿ. ತಿಪ್ಪೇಸ್ವಾಮಿ ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಓದಿ :
ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನೂ ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು!